ಬೆಳಗಾವಿಯಲ್ಲಿ ಪ್ಲಾಸ್ಟಿಕ್ ನಿಷೇಧವಿದ್ದರೂ ಕಾನೂನು ಬಾಹಿರವಾಗಿ ಬಳಕೆ ಮಾಡುತ್ತಿದ್ದವರ ವಿರುದ್ಧ ಮಹಾನಗರ ಪಾಲಿಕೆ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಪಾಲಿಕೆ ಆಯುಕ್ತರ ಕಡಕ್ ಆದೇಶದ ಬೆನ್ನಲ್ಲೇ ಕಣಕ್ಕಿಳಿದ ಅಧಿಕಾರಿಗಳ ತಂಡ, ಒಂದೇ ದಿನದಲ್ಲಿ ಬರೋಬ್ಬರಿ 80 ಸಾವಿರ ರೂಪಾಯಿ ದಂಡ ವಿಧಿಸಿ ಶಾಕ್ ನೀಡಿದೆ.


ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧವಿದ್ದರೂ ಸಹ ಕೆಲವು ಅಂಗಡಿ ಮತ್ತು ಹೊಟೇಲ್ಗಳಲ್ಲಿ ಅನಧಿಕೃತವಾಗಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಮಹಾನಗರ ಪಾಲಿಕೆ ಆಯುಕ್ತರ ಖಡಕ್ ಆದೇಶದ ಮೇರೆಗೆ, ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಹನುಮಂತ ಕಲಾದಗಿ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳ ಮೇಲೆ ದಿಢೀರ್ ದಾಳಿ ನಡೆಸಿತು.

ನಗರದ ಬುರುಡ ಗಲ್ಲಿ, ರವಿವಾರ ಪೇಟೆಯ ವಿವಿಧ ಅಂಗಡಿ ಮುಂಗಟ್ಟುಗಳು ಹಾಗೂ ಬಾಕ್ಸೈಟ್ ರಸ್ತೆಯಲ್ಲಿರುವ ಪ್ರಮುಖ ಹೊಟೇಲ್ಗಳ ಮೇಲೆ ಈ ಜಂಟಿ ದಾಳಿ ಜರುಗಿತು. ಕಾರ್ಯಾಚರಣೆ ವೇಳೆ ಅಪಾರ ಪ್ರಮಾಣದ ನಿಷೇಧಿತ ಪ್ಲಾಸ್ಟಿಕ್ ಜಪ್ತಿ ಮಾಡಿದ ಅಧಿಕಾರಿಗಳು, ನಿಯಮ ಉಲ್ಲಂಘಿಸಿದ್ದವರಿಗೆ ಸ್ಥಳದಲ್ಲೇ ಒಟ್ಟು 80,000 ರೂಪಾಯಿಗಳ ದಂಡ ವಿಧಿಸಿ, ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
