ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಪಡಸಲಗಿ ಬಳಿ ಪೆಟ್ರೋಲ್ ಟ್ಯಾಂಕರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬ್ಯಾಂಕ್ ಕೆಲಸಕ್ಕೆ ತೆರಳುತ್ತಿದ್ದ ಯುವಕನ ಬಲಗಾಲು ಹಾಗೂ ಬಲಗೈ ಕಟ್ ಆಗಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಪಡಸಲಗಿ ಗ್ರಾಮದ ಸಮೀಪ ಪೆಟ್ರೋಲ್ ಟ್ಯಾಂಕರ್ ಹಾಗೂ ಬೈಕ್ ನಡುವೆ ಮುಖಾಮುಖಿ ಭೀಕರ ಅಪಘಾತ ಸಂಭವಿಸಿದೆ. ತೊಗಲುಬಾಗಿ ಗ್ರಾಮದ ಬ್ಯಾಂಕ್ ಕೆಲಸದ ನಿಮಿತ್ತ ಬೆಳಿಗ್ಗೆ ಬೈಕ್‌ನಲ್ಲಿ ತೆರಳುತ್ತಿದ್ದ ಜಮಖಂಡಿ ನಗರದ ನಿವಾಸಿ ನಿತಿನ್ ಚಂಕೇರಿ (29) ಎಂಬ ಯುವಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾನೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಡಿಕ್ಕಿಯ ರಭಸಕ್ಕೆ ಯುವಕನ ಬಲಗಾಲು ಹಾಗೂ ಬಲಗೈ ದೇಹದಿಂದ ತುಂಡಾಗಿ ಬಿದ್ದು, ತೀವ್ರ ರಕ್ತಸ್ರಾವದಿಂದಾಗಿ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಪ್ರತಿನಿತ್ಯದಂತೆ ಬೆಳಿಗ್ಗೆ ಎದ್ದು ಕರ್ತವ್ಯಕ್ಕೆ ಹೊರಟಿದ್ದ ಯುವಕ ಹೀಗೆ ಮಾರ್ಗಮಧ್ಯದಲ್ಲೇ ದಾರುಣವಾಗಿ ಮೃತಪಟ್ಟಿರುವುದು ಸ್ಥಳೀಯರಲ್ಲಿ ಭಾರೀ ಕಂಬನಿ ತರಿಸಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಜಮಖಂಡಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಮಖಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
