ಕುರುಬ ಸಮಾಜದ ಯುವಕ-ಯುವತಿಯರು ಸರ್ಕಾರಿ ಸೇವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಉದ್ದೇಶದಿಂದ, ಯಾವುದೇ ಲಾಭಾಪೇಕ್ಷೆಯಿಲ್ಲದೆ ಸಮಾಜಸೇವೆಯ ದೃಷ್ಟಿಯಿಂದ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವಭಾವಿ ತರಬೇತಿ ಶಿಬಿರವನ್ನು ಆರಂಭಿಸಲಾಗುತ್ತಿದೆ ಎಂದು ಕನಕಶ್ರೀ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಪಿ.ಎನ್.ಕೃಷ್ಣಮೂರ್ತಿ ಹೇಳಿದರು.

ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕ ಸರ್ಕಾರದ ಗ್ರೂಪ್-‘ಸಿ’ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ಹೆಸರಾಂತ ಇನ್ಸೈಟ್ಸ್ IAS ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ವಿನಯ್ ಕುಮಾರ್ ಜಿ.ಬಿ. ಅವರ ನೇತೃತ್ವ, ಮಾರ್ಗದರ್ಶನ ಮತ್ತು ಸಾರಥ್ಯದಲ್ಲಿ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ಮುಂಚೂಣಿಯಲ್ಲಿರುವ ಇನ್ಸೈಟ್ಸ್ IAS ಸಂಸ್ಥೆಯು ಅನುಭವಿ ಬೋಧಕರನ್ನು ಹೊಂದಿದ್ದು, ಕಾಲಕ್ಕೆ ತಕ್ಕ ಬೋಧನಾ ವಿಧಾನಗಳ ಮೂಲಕ ಸಾವಿರಾರು ಅಭ್ಯರ್ಥಿಗಳನ್ನು IAS, IPS, IFS, DC, AC, CEO, SP, DCP, DSP ಸೇರಿದಂತೆ ವಿವಿಧ ಉನ್ನತ ಹುದ್ದೆಗಳಿಗೆ ತಲುಪಿಸಿದೆ. ಇದೇ ಅನುಭವದೊಂದಿಗೆ ಈ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕನಕಶ್ರೀ ಸಂಕೀರ್ಣದಲ್ಲಿ ವಸತಿ ಹಾಗೂ ಅಧ್ಯಯನ ಕೇಂದ್ರದ ಸೌಲಭ್ಯದೊಂದಿಗೆ ಸುಮಾರು ಮೂರು ತಿಂಗಳ ಅವಧಿಯ ತರಬೇತಿ ನಡೆಯಲಿದ್ದು, ತರಬೇತಿ ಸಂಪೂರ್ಣ ಉಚಿತವಾಗಿರುತ್ತದೆ. ಅಭ್ಯರ್ಥಿಗಳ ಊಟ ಮತ್ತು ಉಪಹಾರದ ವೆಚ್ಚಕ್ಕಾಗಿ ಮಾತ್ರ ಮಾಸಿಕ 6,000 ಶುಲ್ಕ ವಿಧಿಸಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಪಿ.ಎನ್. ಕೃಷ್ಣಮೂರ್ತಿ, ಟ್ರಸ್ಟಿ ಸಿ. ಬಸವರಾಜು ಸೇರಿದಂತೆ ಟ್ರಸ್ಟ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 94834 25046 ಹಾಗೂ 94480 13559 ಅನ್ನು ಸಂಪರ್ಕಿಸುವಂತೆ ತಿಳಿಸಿದರು.
