Belagavi

ಬೆಳಗಾವಿಯಲ್ಲಿ ಸದ್ಯಕ್ಕಿಲ್ಲ ನೀರಿನ ಆತಂಕ; ಸಚಿವ ಸತೀಶ್ ಜಾರಕಿಹೊಳಿ

Share

“ಬೆಳಗಾವಿ ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಕೊರತೆಯಿಲ್ಲ, ಆದರೆ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಹರಿಸುವುದು ಕಷ್ಟ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಮುಖ ಸಭೆಯ ಬಳಿಕ ಮಾತನಾಡಿದ ಅವರು, ನಗರದ ಜಲಮೂಲಗಳು ಹಾಗೂ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲೆಯಲ್ಲಿ ಸದ್ಯಕ್ಕೆ ನೀರಿನ ಆತಂಕ ಪಡುವ ಅಗತ್ಯವಿಲ್ಲ ಎಂದು ಜನತೆಗೆ ಭರವಸೆ ನೀಡಿದ್ದಾರೆ. ಹಿಡಕಲ್ ಜಲಾಶಯದಲ್ಲಿ ಮುಂದಿನ ಎರಡು ತಿಂಗಳಿಗೆ ಅಂದರೆ ಜುಲೈ ಅಂತ್ಯದವರೆಗೆ ಸಾಕಾಗುವಷ್ಟು ನೀರಿದೆ. ಡ್ಯಾಂಗೆ ಸದ್ಯಕ್ಕೆ ಒಳಹರಿವು ಆರಂಭವಾಗದ ಕಾರಣ ನೀರು ಕಡಿಮೆಯಾದಂತೆ ಭಾಸವಾಗುತ್ತಿದೆಯೇ ಹೊರತು ಕೊರತೆಯಿಲ್ಲ. ಜಿಲ್ಲೆಯಲ್ಲಿ 24/7 ಕುಡಿಯುವ ನೀರಿನ ಯೋಜನೆ ಇನ್ನು ಪೂರ್ಣಗೊಳ್ಳದ ಕಾರಣ ಸದ್ಯ ಕೇವಲ ಒಂದು ಗಂಟೆ ಮಾತ್ರ ನೀರು ಬಿಡಲಾಗುತ್ತಿದೆ. ನಗರದಲ್ಲಿ ಸಾಕಷ್ಟು ಬೋರ್‌ವೆಲ್‌ಗಳಿದ್ದು, ತುರ್ತು ಪರಿಸ್ಥಿತಿ ಎದುರಾದರೆ ಮಹಾನಗರ ಪಾಲಿಕೆ ವತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲು ಚಿಂತನೆ ನಡೆಸಲಾಗುತ್ತಿದೆ. ಅಲ್ಲದೆ, ಟ್ಯಾಂಕರ್ ನೀರನ್ನು ದುಪ್ಪಟ್ಟು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಜಲಾಶಯದಿಂದ ಧಾರವಾಡಕ್ಕೆ ಹೆಚ್ಚುವರಿ ನೀರು ಹರಿಸಲಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದ ಸಚಿವರು, ಕೇವಲ ಕೈಗಾರಿಕೆಗಾಗಿ ಮೀಸಲಿಟ್ಟ ನೀರನ್ನು ಮಾತ್ರ ಕೊಂಡೊಯ್ಯಲಾಗುತ್ತಿದೆ ಎಂದರು. ಇನ್ನು ಮಹಾರಾಷ್ಟ್ರದಲ್ಲೇ ಸದ್ಯ ಪರಿಸ್ಥಿತಿ ಸರಿಯಿಲ್ಲದ ಕಾರಣ ಅಲ್ಲಿಂದ ಕೃಷ್ಣಾ ನದಿಗೆ ನೀರು ಬಿಡುವುದು ಕಷ್ಟ ಎಂದು ಉನ್ನತ ಮಟ್ಟದ ಅಧಿಕಾರಿಗಳ ಭೇಟಿ ವೇಳೆ ಮಹಾರಾಷ್ಟ್ರ ಸರ್ಕಾರ ಸ್ಪಷ್ಟಪಡಿಸಿದೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಪಾಲಿಕೆಯವರು ತಳಮಟ್ಟದ ಸಮಸ್ಯೆಗಳ ಬಗ್ಗೆ ತಮಗೆ ಬಂದು ಸೂಕ್ತ ಮಾಹಿತಿ ನೀಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಬಹಿರಂಗವಾಗಿಯೇ ಗರಂ ಆದರು.

Tags:

error: Content is protected !!