Belagavi

ಜೂನ್ 28ಕ್ಕೆ ಬೆಳಗಾವಿ ಜಿಲ್ಲಾದ್ಯಂತ ಪಲ್ಸ್ ಪೋಲಿಯೋ ಅಭಿಯಾನ: 4.71 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಬೃಹತ್ ಗುರಿ

Share

ಭಾರತವು ಪೋಲಿಯೋ ಮುಕ್ತವಾಗಿ 15 ವರ್ಷಗಳೇ ಕಳೆದಿದ್ದರೂ, ನೆರೆ ದೇಶಗಳಲ್ಲಿನ ಪೋಲಿಯೋ ಪ್ರಕರಣಗಳ ಹಿನ್ನೆಲೆಯಲ್ಲಿ ದೇಶದ ಮಕ್ಕಳ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮವಾಗಿ ಜೂನ್ 28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ದಿನವನ್ನು ಹಮ್ಮಿಕೊಳ್ಳಲಾಗಿದೆ.

ಬೆಳಗಾವಿ ಜಿಲ್ಲಾದ್ಯಂತ ಬರುವ ಜೂನ್ 28ರ ಭಾನುವಾರದಂದು ಒಂದು ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, 0-5 ವರ್ಷದೊಳಗಿನ ಒಟ್ಟು 4,71,041 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಐ.ಪಿ. ಗಡದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೊದಲ ದಿನ ಜಿಲ್ಲೆಯ 2331 ಬೂತ್‌ಗಳಲ್ಲಿ ಲಸಿಕೆ ನೀಡಲಾಗುವುದು ಹಾಗೂ ನಂತರದ 2-3 ದಿನಗಳಲ್ಲಿ 9514 ಲಸಿಕಾ ಕಾರ್ಯಕರ್ತರು ಮತ್ತು 618 ಮೇಲ್ವಿಚಾರಕರ ತಂಡವು ಮನೆ-ಮನೆಗೆ ಭೇಟಿ ನೀಡಿ ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲಿದೆ. ವಿಶೇಷವಾಗಿ ವಲಸಿಗರು, ಇಟ್ಟಿಗೆ ಭಟ್ಟಿ, ಕಾಮಗಾರಿ ಪ್ರದೇಶ, ರೈಲ್ವೇ ಸ್ಟೇಷನ್ ಮತ್ತು ಕೊಳಚೆ ಪ್ರದೇಶಗಳಲ್ಲಿನ ಮಕ್ಕಳಿಗೆ ಆದ್ಯತೆ ನೀಡಲು 49 ಸಂಚಾರಿ ಹಾಗೂ 74 ಟ್ರಾನ್ಸಿಟ್ ತಂಡಗಳನ್ನು ನಿಯೋಜಿಸಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಭೆ ಜರುಗಿದ್ದು, “ಪೋಲಿಯೋ ಮುಕ್ತ ಭಾರತ, ಪೋಲಿಯೋ ಮುಕ್ತ ಕರ್ನಾಟಕ” ದ್ಯೇಯದೊಂದಿಗೆ ಈ ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Tags:

error: Content is protected !!