ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆಯ ಸಂಚಲನ ಸೃಷ್ಟಿಯಾಗಿರುವ ಬೆನ್ನಲ್ಲೇ, ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ ಸೇಠ್ ಮಾಧ್ಯಮಗಳ ಎದುರು ಮಹತ್ವದ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಂಪುಟದಲ್ಲಿ ಇನ್ನೂ 20 ಸ್ಥಾನಗಳು ಖಾಲಿ ಇವೆ. ಅಲ್ಲದೇ ರಾಮಲಿಂಗಾ ರೆಡ್ಡಿ ಅವರ ಮುನಿಸು ಸಿಎಂ ದೂರ ಮಾಡಲಿದ್ದಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಆಸೀಫ್ ಸೇಠ್, ಸದ್ಯದ ಮಟ್ಟಿಗೆ ಕೇವಲ 12 ಜನರಿಗೆ ಮಾತ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದ್ದು, ಇನ್ನುಳಿದ 20 ಸ್ಥಾನಗಳು ಖಾಲಿಯಿವೆ ಎಂದರು. ಜಿಲ್ಲೆಯ ಹಿರಿಯ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿದ್ದು, ತಮಗೆ ಸಚಿವ ಸ್ಥಾನ ಸಿಗುವ ಕುರಿತು ಕೇಳಿದ ಪ್ರಶ್ನೆಗೆ, ಪಕ್ಷದಲ್ಲಿ ಹಲವಾರು ಹಿರಿಯ ಶಾಸಕರಿದ್ದಾರೆ, ಮೊದಲ ಆದ್ಯತೆ ಹಿರಿಯರಿಗೆ ಸಿಗಬೇಕು ಎಂದು ಸ್ಪಷ್ಟಪಡಿಸಿದರು. ನಾವು ಸ್ವತಃ ಹೋಗಿ ಹೈಕಮಾಂಡ್ ಮುಂದೆ ಸಚಿವ ಸ್ಥಾನಕ್ಕಾಗಿ ಹಠ ಹಿಡಿಯುವುದಿಲ್ಲ, ಎಲ್ಲವನ್ನೂ ವರಿಷ್ಠರೇ ನಿರ್ಣಯಿಸಲಿದ್ದಾರೆ. ಜಿಲ್ಲೆಯವರೇ ಆದ ಸತೀಶ್ ಜಾರಕಿಹೊಳಿ ಅವರಿಗೆ ಈಗಾಗಲೇ ಸಚಿವ ಸ್ಥಾನ ಸಿಕ್ಕಿರುವುದರಿಂದ, ಅವರು ನಮ್ಮ ಎಲ್ಲ ಕ್ಷೇತ್ರಗಳ ಕೆಲಸಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವೇಳೆ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ಅಸಮಾಧಾನ ಸ್ಫೋಟ ಮತ್ತು ರಾಜೀನಾಮೆ ತಂತ್ರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಆಸೀಫ್ ಸೇಠ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ರಾಮಲಿಂಗಾರೆಡ್ಡಿ ಅವರೊಂದಿಗೆ ಚರ್ಚಿಸಿ, ಅವರ ಮನವೊಲಿಸುವ ಸಂಪೂರ್ಣ ಭರವಸೆಯನ್ನು ನೀಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸುವ ಮೂಲಕ ರಾಜ್ಯ ರಾಜಕಾರಣದ ಸದ್ಯದ ವಿದ್ಯಮಾನಗಳಿಗೆ ಅವರು ತೆರೆ ಎಳೆದರು.
