gokak

ಡೆತ್‌ನೋಟ್ ಬರೆದಿಟ್ಟು ಬೆಳಗಾವಿಯಲ್ಲಿ ವ್ಯಕ್ತಿ ಆತ್ಮಹತ್ಯೆ: ಡಿವೈಎಸ್ಪಿ, ಪಿಎಸ್‌ಐ ಸೇರಿ ಹಲವರ ಹೆಸರು ಉಲ್ಲೇಖ!

Share

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಡಿವೈಎಸ್ಪಿ, ಪಿಎಸ್‌ಐ ಸೇರಿದಂತೆ ಹಲವರ ಹೆಸರು ಉಲ್ಲೇಖಿಸಿ ಪತ್ರ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತರನ್ನು ರವೀಂದ್ರ ದಾನವ್ವಗೋಳ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಪತ್ರದಲ್ಲಿ, ತಾನು ಜೀವ ಬೆದರಿಕೆಗೆ ಒಳಗಾಗಿರುವುದರಿಂದ ಈ ಕಠಿಣ ನಿರ್ಧಾರ ಕೈಗೊಂಡಿರುವುದಾಗಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಪತ್ರದಲ್ಲಿ ಲಕ್ಷ್ಮಣ್ ಚಂದರಗಿ ಹಾಗೂ ಭರಮಪ್ಪ ಪೂಜಾರಿ ಎಂಬುವರಿಂದ ಎಂಟು ಲಕ್ಷ ರೂ. ಸಾಲ ಪಡೆದಿದ್ದಾಗಿ ಉಲ್ಲೇಖಿಸಿದ್ದು, ಸಾಲದ ಹಣ ವಾಪಸ್ ಕೇಳಿದಾಗ ತನ್ನ ಮೇಲೆ ಜೀವ ಬೆದರಿಕೆ ಹಾಕಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ಕುರಿತು ಪೊಲೀಸರಿಗೆ ದೂರು ನೀಡಿದ ನಂತರವೂ ತನಗೆ ನ್ಯಾಯ ಸಿಗಲಿಲ್ಲ ಎಂದು ಬರೆದಿದ್ದಾರೆ.
ಇದಲ್ಲದೆ, ಪಿಎಸ್‌ಐ ಆನಂದ ಹಾಗೂ ಹಿಂದಿನ ಡಿವೈಎಸ್ಪಿ ಮುಲ್ಲಾ ಅವರಿಂದಲೂ ತನಗೆ ಅನ್ಯಾಯವಾಗಿದೆ ಎಂದು ಪತ್ರದಲ್ಲಿ ಆರೋಪಿಸಿರುವುದಾಗಿ ತಿಳಿದುಬಂದಿದೆ.

ರವೀಂದ್ರ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

ಮೂಡಲಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆ ಪತ್ರದ ಸತ್ಯಾಸತ್ಯತೆ ಹಾಗೂ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ

Tags:

error: Content is protected !!