BELAGAVI

ಸತ್ತಿ ಗ್ರಾಮದಲ್ಲಿ ವಕೀಲರ ಮೇಲೆ ಹಲ್ಲೆ; ಬೆಳಗಾವಿ ಜಿಲ್ಲಾ ವಕೀಲರ ಸಂಘದಿಂದ ಪ್ರತಿಭಟನೆ

Share

ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಕರ್ತವ್ಯದ ಹೆಸರಿನಲ್ಲಿ ವಕೀಲರೊಬ್ಬರ ಮೇಲೆ ದೌರ್ಜನ್ಯ ಎಸಗಿದ ಪಿಎಸ್‌ಐ ಉಪ್ಪಾರ್ ಹಾಗೂ ನಾಲ್ವರು ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಬೆಳಗಾವಿ ಬಾರ್ ಅಸೋಸಿಯೇಷನ್ ವತಿಯಿಂದ ಎಸ್ಪಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮೇ 30 ರಂದು ಅಥಣಿ ತಾಲೂಕಿನ ಸತ್ತಿ ಗ್ರಾಮದ ಬುರಾನ್‌ಸಾಬ್ ಜಾತ್ರಾ ಉತ್ಸವದ ವೇಳೆ ಎರಡು ಗುಂಪುಗಳ ನಡುವೆ ಕೋಮು ಘರ್ಷಣೆ ನಡೆದಿತ್ತು. ಈ ವೇಳೆ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸ್ಥಳೀಯ ಬಾಲಕೃಷ್ಣ ಕ್ಲಿನಿಕ್‌ಗೆ ದಾಖಲಿಸಲಾಗಿತ್ತು. ಆಸ್ಪತ್ರೆ ಮುಂಭಾಗ ಜಮಾಯಿಸಿದ್ದ ಜನರನ್ನು ಚದುರಿಸಲು ಅಥಣಿ ಪೊಲೀಸರು ಮುಂದಾಗಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಪಕ್ಕದಲ್ಲೇ ಇದ್ದ ತಮ್ಮ ಮನೆಯ ಮುಂಭಾಗ ಕುಳಿತಿದ್ದ ವಕೀಲರಾದ ಮಲ್ಲಿಕಾರ್ಜುನ್ ಕೋರಿ ಅವರ ಮೇಲೆಯೂ ಪಿಎಸ್‌ಐ ಉಪ್ಪಾರ್ ಮತ್ತು ನಾಲ್ವರು ಕಾನ್ಸ್‌ಟೇಬಲ್‌ಗಳು ದೌರ್ಜನ್ಯ ಎಸಗಿದ್ದಾರೆ. ತಾವು ವಕೀಲರಾಗಿದ್ದು, ಘರ್ಷಣೆಯಲ್ಲಿ ಭಾಗಿಯಾಗಿಲ್ಲ ಎಂದು ವಿನಂತಿಸಿದರೂ ಕೇಳದ ಪೊಲೀಸರು, ವಕೀಲರ ಕಾಲರ್ ಪಟ್ಟಿ ಹಿಡಿದು ಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಒದ್ದು ಹಲ್ಲೆ ನಡೆಸಿದ್ದಾರೆ. ಈ ಇಡೀ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ ಎಂದು ವಕೀಲರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ “ವಕೀಲರ ಮೇಲಿನ ದೌರ್ಜನ್ಯ ತಡೆ ಕಾಯ್ದೆ-2023” ಜಾರಿಗೆ ತಂದಿದ್ದರೂ ಸಹ, ಕಾನೂನು ರಕ್ಷಕರೇ ಕಾನೂನು ಕೈಗೆತ್ತಿಕೊಂಡು ವಕೀಲ ಸಮುದಾಯ ಹಾಗೂ ವಕೀಲ ವೃತ್ತಿಗೆ ಕಪ್ಪುಚುಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಹಲ್ಲೆಕೋರ ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಬೆಳಗಾವಿ ಬಾರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಚಿನ್ ಆರ್. ಶಿವಣ್ಣವರ್ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾರ್ ಅಸೋಸಿಯೇಷನ್’ನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!