Uncategorized

ಸಂಭ್ರಮದಿಂದ ಜರುಗಿದ ಕಾರ ಹುಣ್ಣಿಮೆ: ಶೃಂಗಾರಗೊಂಡ ಎತ್ತುಗಳ ಮೆರವಣಿಗೆ, ಕರಿಹರಿಯುವ ಸಂಪ್ರದಾಯಕ್ಕೆ ಸಾಕ್ಷಿಯಾದ ವಿಜಯಪುರ

Share

ಉತ್ತರ ಕರ್ನಾಟಕದ ರೈತರ ಬದುಕಿನೊಂದಿಗೆ ಬೆಸೆದುಕೊಂಡಿರುವ ಸಾಂಪ್ರದಾಯಿಕ ಹಬ್ಬ ಕಾರ ಹುಣ್ಣಿಮೆಯನ್ನು ವಿಜಯಪುರ ಜಿಲ್ಲೆಯಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ವಿಜಯಪುರ ನಗರ, ತಿಕೋಟಾ ಹಾಗೂ ಬಸವನ ಬಾಗೇವಾಡಿ ಸೇರಿದಂತೆ ವಿವಿಧೆಡೆ ರೈತರು ತಮ್ಮ ಎತ್ತುಗಳನ್ನು ಶೃಂಗರಿಸಿ ಮೆರವಣಿಗೆ ನಡೆಸಿದರು. ಬಳಿಕ ನಡೆದ ಕರಿಹರಿಯುವ ಕಾರ್ಯಕ್ರಮವು ಜನರ ಗಮನ ಸೆಳೆಯಿತು. ಈ ಕುರಿತು ಒಂದು ವಿಶೇಷ ವರದಿ.

ಕೃಷಿ ಸಂಸ್ಕೃತಿಯ ಪ್ರತೀಕವಾಗಿರುವ ಕಾರ ಹುಣ್ಣಿಮೆ ಹಬ್ಬವು ಉತ್ತರ ಕರ್ನಾಟಕದ ರೈತರಿಗೆ ವಿಶೇಷ ಮಹತ್ವ ಹೊಂದಿದೆ. ವರ್ಷಪೂರ್ತಿ ಹೊಲದಲ್ಲಿ ದುಡಿಯುವ ಎತ್ತುಗಳನ್ನು ಸ್ನಾನ ಮಾಡಿಸಿ, ಬಣ್ಣ ಬಣ್ಣದ ಅಲಂಕಾರ, ಹೂಮಾಲೆ ಹಾಗೂ ಗಂಟೆಗಳಿಂದ ಶೃಂಗರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ವಿಜಯಪುರ ನಗರ, ತಿಕೋಟಾ ಹಾಗೂ ಬಸವನ ಬಾಗೇವಾಡಿಯಲ್ಲಿ ಸೇರಿದಂತೆ ಹಲವೆಡೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ರೈತರು ಮತ್ತು ಸಾರ್ವಜನಿಕರು ಭಾಗವಹಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು. ಸಾಂಪ್ರದಾಯಿಕ ವಾದ್ಯಗಳು, ಜಾನಪದ ಕಲಾ ತಂಡಗಳು ಮತ್ತು ಭಕ್ತಿಗೀತೆಗಳ ನಡುವೆ ಎತ್ತುಗಳ ಮೆರವಣಿಗೆ ವಿಶೇಷ ಆಕರ್ಷಣೆಯಾಗಿತ್ತು.

ಬಳಿಕ ನಡೆದ ಕರಿಹರಿಯುವ ಕಾರ್ಯಕ್ರಮದಲ್ಲಿ ಬಿಳಿ ಹಾಗೂ ಕಪ್ಪು ಎತ್ತುಗಳನ್ನು ಒಂದೇ ವೇಳೆ ಬಿಡಲಾಯಿತು. ಯಾವ ಎತ್ತು ಮೊದಲು ಮುಂದೆ ಬರುತ್ತದೆಯೋ ಅದರ ಆಧಾರದ ಮೇಲೆ ಮುಂಬರುವ ಕೃಷಿ ಹಂಗಾಮಿನಲ್ಲಿ ಉತ್ತಮ ಬೆಳೆ ಮತ್ತು ಮಳೆಯಾಗಲಿದೆ ಎಂಬುದು ರೈತರ ಸಾಂಪ್ರದಾಯಿಕ ನಂಬಿಕೆಯಾಗಿದೆ. ಈ ಸಂಪ್ರದಾಯವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು.
“ಕಾರ ಹುಣ್ಣಿಮೆ ನಮ್ಮ ಕೃಷಿ ಸಂಸ್ಕೃತಿಯ ಪ್ರತೀಕ. ನಮ್ಮ ಜೊತೆ ವರ್ಷಪೂರ್ತಿ ದುಡಿಯುವ ಎತ್ತುಗಳಿಗೆ ಗೌರವ ಸಲ್ಲಿಸುವ ದಿನ ಇದು. ಉತ್ತಮ ಮಳೆ, ಸಮೃದ್ಧ ಬೆಳೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಆಧುನಿಕ ಕೃಷಿ ಪದ್ಧತಿಗಳು ಹೆಚ್ಚಾದರೂ, ರೈತರ ಬದುಕಿನಲ್ಲಿ ಕಾರ ಹುಣ್ಣಿಮೆಯಂತಹ ಸಂಪ್ರದಾಯಗಳು ಇನ್ನೂ ಜೀವಂತವಾಗಿವೆ. ಗ್ರಾಮೀಣ ಸಂಸ್ಕೃತಿ, ಕೃಷಿ ಪರಂಪರೆ ಹಾಗೂ ಪ್ರಕೃತಿಯ ಮೇಲಿನ ಭಕ್ತಿಯನ್ನು ಪ್ರತಿಬಿಂಬಿಸುವ ಈ ಹಬ್ಬ ಉತ್ತರ ಕರ್ನಾಟಕದಲ್ಲಿ ಸಡಗರ-ಸಂಭ್ರಮದಿಂದ ನೆರವೇರಿತು.

 

ಒಟ್ಟಾರೆ ರೈತರು, ಜಾನುವಾರುಗಳು ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಕಾರ ಹುಣ್ಣಿಮೆ ಹಬ್ಬವು ಗ್ರಾಮೀಣ ಸಂಸ್ಕೃತಿಯ ವೈಭವವನ್ನು ಮತ್ತೊಮ್ಮೆ ಅನಾವರಣಗೊಳಿಸಿತು.

 

Tags:

error: Content is protected !!