Belagavi

ಸೋಲಾಪುರದಲ್ಲಿ ಕನ್ನಡಿಗರ ಭವ್ಯ ಧರಣಿ ಸತ್ಯಾಗ್ರಹ ಯಶಸ್ವಿ

Share

ಸೋಲಾಪುರ, ಜೂನ್ 20: ಮಹಾರಾಷ್ಟ್ರದ ಗಡಿಭಾಗದ ಕನ್ನಡ ಅಲ್ಪಸಂಖ್ಯಾತರ ವಿವಿಧ ಸಮಸ್ಯೆಗಳ ಪರಿಹಾರ ಹಾಗೂ ಕನ್ನಡ ಶಾಲೆಗಳ ಉಳಿವಿಗಾಗಿ ಇಂದು ಸೋಲಾಪುರ ಜಿಲ್ಲಾ ಪರಿಷತ್ ಕಚೇರಿ ಎದುರು ಆದರ್ಶ ಕನ್ನಡ ಬಳಗ, ಮಹಾರಾಷ್ಟ್ರ ಹಾಗೂ ವಿವಿಧ ಕನ್ನಡ ಸಂಘ-ಸಂಸ್ಥೆಗಳು, ಶಿಕ್ಷಕರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಭವ್ಯ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಈ ಧರಣಿ ಸತ್ಯಾಗ್ರಹದಲ್ಲಿ ಗಡಿಭಾಗದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ನೂರಾರು ಕನ್ನಡಾಭಿಮಾನಿಗಳು, ಶಿಕ್ಷಕರು, ನಿರುದ್ಯೋಗಿ ಡಿ.ಎಡ್ ಹಾಗೂ ಬಿ.ಎಡ್ ಅಭ್ಯರ್ಥಿಗಳು, ಕನ್ನಡ ಶಾಲೆಗಳ ಪ್ರತಿನಿಧಿಗಳು ಹಾಗೂ ಕನ್ನಡ ಸಂಘಟನೆಗಳ ಮುಖಂಡರು ಭಾಗವಹಿಸಿ ಸರ್ಕಾರದ ಗಮನ ಸೆಳೆದರು.

ಹೋರಾಟದಲ್ಲಿ ಪ್ರಮುಖವಾಗಿ ಕನ್ನಡ ಮಾಧ್ಯಮದಲ್ಲಿಯೇ ಟಿಇಟಿ (TET) ಪರೀಕ್ಷೆ ನಡೆಸಬೇಕು, ಕನ್ನಡ ಶಾಲೆಗಳಲ್ಲಿನ ಖಾಲಿ ಶಿಕ್ಷಕರ ಹುದ್ದೆಗಳನ್ನು ಶೇ.100 ರಷ್ಟು ಭರ್ತಿ ಮಾಡಬೇಕು, ಕನ್ನಡ ಶಾಲೆಗಳಿಗೆ ವಿಶೇಷ ಅನುದಾನ ನೀಡಬೇಕು, ಕನ್ನಡ ಭಾಷಿಕರ ಶೈಕ್ಷಣಿಕ ಹಾಗೂ ಭಾಷಿಕ ಹಕ್ಕುಗಳನ್ನು ಸಂರಕ್ಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಲಾಯಿತು.

ಹೋರಾಟದ ನಂತರ ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಕನ್ನಡ ಅಲ್ಪಸಂಖ್ಯಾತರ ನ್ಯಾಯಯುತ ಬೇಡಿಕೆಗಳನ್ನು ತಕ್ಷಣವೇ ಈಡೇರಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್ ಶೇಖ್, “ಕನ್ನಡಿಗರ ಹಕ್ಕು ಹಾಗೂ ಕನ್ನಡ ಶಾಲೆಗಳ ಉಳಿವಿಗಾಗಿ ಈ ಹೋರಾಟ ನಡೆಸಲಾಗಿದೆ. ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಧರಣಿ ಸತ್ಯಾಗ್ರಹದಲ್ಲಿ ರಾಜ್ಯ ಕನ್ನಡ ಶಿಕ್ಷಕರ ನಾಯಕ ಬಸವರಾಜ ಗುರವ್, ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಧರಣಿ ಸತ್ಯಾಗ್ರಹ ಶಾಂತಿಯುತವಾಗಿ ಹಾಗೂ ಅತ್ಯಂತ ಯಶಸ್ವಿಯಾಗಿ ನಡೆಯಿತು.

Tags:

error: Content is protected !!