Vijaypura

ಆಲಮಟ್ಟಿ ನೀರಿನ ಕೊರತೆಯ ಪರಿಣಾಮ: ಮೀನುಗಳ ಮಾರಣಹೋಮ

Share

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಾಡಿಹಾಳ ಗ್ರಾಮದ ಕೆರೆಯಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದ ಪರಿಣಾಮ ಲಕ್ಷಾಂತರ ಮೀನುಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಕೆರೆಯ ನೀರು ಬಹುತೇಕ ಬತ್ತಿ ಹೋಗಿರುವ ಕಾರಣ ಮೀನುಗಳಿಗೆ ಅಗತ್ಯವಾದ ಆಮ್ಲಜನಕದ ಕೊರತೆ ಉಂಟಾಗಿ ದೊಡ್ಡ ಪ್ರಮಾಣದಲ್ಲಿ ಮೀನುಗಳು ಮೃತಪಟ್ಟಿವೆ. ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗದಿರುವುದು ಈ ದುರ್ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಕೆರೆಯ ನೀರಿನ ಮಟ್ಟ ನಿರಂತರವಾಗಿ ಇಳಿಮುಖ ವಾಗುತ್ತಿದ್ದು, ಇದರ ಪರಿಣಾಮ ವಾಗಿ ಸಾವಿರಾರು ಮೀನುಗಳು ತೀರದ ಬಳಿ ತೇಲಿ ಬರುತ್ತಿರುವ ದೃಶ್ಯ ಕಂಡುಬಂದಿದೆ. ಮೀನು ಗಾರಿಕೆ ಚಟುವಟಿಕೆಯನ್ನು ಅವಲಂಬಿಸಿರುವ ಸ್ಥಳೀಯ ಮೀನುಗಾರರಿಗೆ ಇದರಿಂದ ಭಾರೀ ನಷ್ಟ ಉಂಟಾಗಿದೆ. ಕೆರೆಯಲ್ಲಿ ಬೆಳೆಸಲಾಗಿದ್ದ ಮೀನುಗಳು ಸಾಯುತ್ತಿರುವುದರಿಂದ ಅವರ ಜೀವನೋಪಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಮೀನು ಸಂಪತ್ತು ನಾಶವಾಗಿರುವುದಾಗಿ ಮೀನುಗಾರರು ಅಳಲು ತೋಡಿಕೊಂಡಿದ್ದಾರೆ. ಸತ್ತ ಮೀನುಗಳಿಂದ ದುರ್ವಾಸನೆ ಹರಡುತ್ತಿದ್ದು, ಸಾರ್ವಜನಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Tags:

error: Content is protected !!