ಹಿರಿಯ ನಾಯಕರಾದ ಎಚ್.ಕೆ. ಪಾಟೀಲ್ ಮತ್ತು ರಾಮಲಿಂಗಾರೆಡ್ಡಿ ಅವರಿಗೆ ಸೂಕ್ತ ಸ್ಥಾನಮಾನ ನೀಡದ ಹಿನ್ನೆಲೆಯಲ್ಲಿ ಈಗ ಸರ್ಕಾರದ ವಿರುದ್ಧ ಅಸಮಾಧಾನದ ಬೆಂಕಿ ಬುಗಿಲೆದ್ದಿದೆ. ಬೆಳಗಾವಿಯಲ್ಲಿ ಇಂದು ಜಂಟಿ ಜಂಟಿ ಮಾಧ್ಯಮಗೋಷ್ಠಿ ನಡೆಸಿದ ರೆಡ್ಡಿ ಸಮಾಜದ ಮುಖಂಡರು, ಇಬ್ಬರು ಕಪ್ಪುಚುಕ್ಕೆಯಿಲ್ಲದ ಮುತ್ಸದ್ದಿ ನಾಯಕರಿಗೆ ಅನ್ಯಾಯವಾಗಿದ್ದು, ತಕ್ಷಣವೇ ಸೂಕ್ತ ಸ್ಥಾನ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ರೆಡ್ಡಿ ಸಮಾಜದ ಪ್ರಮುಖರಾದ ಬಸವರಾಜ್ ಬಾವಲತ್ತಿ ಅವರು ಮಾತನಾಡಿದರು. ಎಚ್. ಕೆ ಪಾಟೀಲ್ ಅವರು ಅತ್ಯಂತ ಮುತ್ಸದ್ಧಿ, ಅನುಭವಿ ರಾಜಕಾರಣಿಯಾಗಿದ್ದಾರೆ. ಅವರ ಅಪಾರವಾದ ಆಡಳಿತದ ಪಾಂಡಿತ್ಯವನ್ನು ಪರಿಗಣಿಸಿ ಉತ್ತಮ ಇಲಾಖೆಯ ಜವಾಬ್ದಾರಿಯನ್ನು ನೀಡದೇ ಅವರನ್ನು ಸಚಿವ ಸ್ಥಾನದಿಂದ ದೂರವಿಟ್ಟಿರುವುದು ತೀವ್ರ ನೋವನ್ನ ತಂದಿದೆ. ಕರ್ನಾಟಕದ ಏಕೀಕರಣದ ಸಂದರ್ಭದಿಂದ ಕಾಂಗ್ರೆಸ್ ಪಕ್ಷಕ್ಕೆ ಅವರ ಕುಟುಂಬದ ಸೇವೆ ಅಪ್ರತಿಮವಾಗಿದೆ. ಎಚ್.ಕೆ. ಪಾಟೀಲ್ ಅವರ ತಂದೆ ಕೆ.ಎಚ್. ಪಾಟೀಲ್ ಅವರು ವಿವಿಧ ಖಾತೆಗಳನ್ನು ನಿಭಾಯಿಸುವುದರೊಡನೆ ಕಾಂಗ್ರೆಸ್ ಅಧ್ಯಕ್ಷರಾಗಿ, ಸಿಂಡಿಕೇಟ್ ಸದಸ್ಯರು, ಪರಿಷತ್ತಿನ ಸದಸ್ಯರಾಗಿ, ಮಹಾರಾಷ್ಟ್ರ ಕಾಂಗ್ರೆಸ್ಸಿನ ಉಸ್ತುವಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ತಂದೆ ಹಾಗೂ ಮಗನ ರಾಜಕೀಯ ಜೀವನದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆಯಿಲ್ಲ ಎಂದರು.

ಎಚ್.ಕೆ. ಪಾಟೀಲ್ ಅವರು ಗಡಿ ಉಸ್ತುವಾರಿಗಳಾಗಿ ಕನ್ನಡ ನಾಡು, ನುಡಿಗಾಗಿ ಪ್ರಾಮಾಣಿಕ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ನೀರಾವರಿ ಇಲಾಖೆ, ಕಾನೂನು ಇಲಾಖೆ, ಗ್ರಾಮೀಣಾಭಿವೃದ್ಧಿ ಸಚಿವರ ಜವಾಬ್ದಾರಿಯನ್ನು ಹೊತ್ತು ರೈತರ ಹಿತದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅಲ್ಲದೇ ರಾಮಲಿಂಗಾ ರೆಡ್ಡಿ ಅವರು 8 ಅವಧಿಗೆ ಆಯ್ಕೆಯಾದ ಸೋಲಿಲ್ಲದ ಸರದಾರ. ಯಾವುದೇ ಕಪ್ಪು ಚುಕ್ಕೆಯಿಲ್ಲದಂತೆ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದವರು. ಅವರ ಹಿರಿತನ ಮತ್ತು ನಿಷ್ಠೆಯನ್ನು ಪರಿಗಣಿಸಿ ಇಬ್ಬರೂ ನಾಯಕರಿಗೆ ಸೂಕ್ತ ಸ್ಥಾನ ನೀಡಬೇಕು. ಇಲ್ಲದಿದ್ದರೇ, ವಿವಿಧ ಹಂತಗಳಲ್ಲಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು.
ಮಾಧ್ಯಮಗೋಷ್ಟಿಯಲ್ಲಿ ರಾಮಣ್ಣ ಮುಳ್ಳೂರ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
