BELAGAVI

ಬೆಳಗಾವಿ: ರೈಲ್ವೆ ಮೇಲ್ಸೇತುವೆ ಮೇಲೆ ಹೆಮ್ಮರಗಳ ಆತಂಕ; ಸವಾರರ ಪ್ರಾಣಕ್ಕೆ ಸಂಚಕಾರ!

Share

ಸ್ಮಾರ್ಟ್ ಸಿಟಿ ಬೆಳಗಾವಿಯ ಹೃದಯಭಾಗದಲ್ಲೇ ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುವಂತಹ ದೃಶ್ಯವೊಂದು ಬೆಳಕಿಗೆ ಬಂದಿದೆ. ಗೋಗಟೆ ಸರ್ಕಲ್‌ನಿಂದ ಗೋವಾವೇಸ್ ಕಡೆಗೆ ಹೋಗುವ ರೈಲ್ವೆ ಮೇಲ್ಸೇತುವೆಯ ಮೇಲೆಯೇ ಗಿಡಗಂಟಿಗಳು ಬೆಳೆದು ನಿಂತಿದ್ದು, ಮಹಾನಗರ ಪಾಲಿಕೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗೋಗಟೆ ವೃತ್ತದ ಸಿಗ್ನಲ್‌ನಿಂದ ಗೋವಾವೇಸ್ ಕಡೆಗೆ ಸಾಗುವ ರೈಲ್ವೆ ಓವರ್‌ಬ್ರಿಡ್ಜ್‌ನ ರಸ್ತೆ ಬದಿ, ಫುಟ್‌ಪಾತ್ ಹಾಗೂ ಸೆಂಟರ್ ಡಿವೈಡರ್‌ಗಳಲ್ಲಿ ಆಲ, ಅರಳಿಯಂತಹ ದೈತ್ಯ ಗಿಡಗಳು ಬೆಳೆದು ನಿಂತಿವೆ. ಕಳೆದ ಒಂದು ವರ್ಷದಿಂದ ಯಾವುದೇ ಸ್ವಚ್ಛತೆ ಕಾಣದ ಈ ಗಿಡಗಳ ರೆಂಬೆಗಳು ರಸ್ತೆಗೆ ಚಾಚಿಕೊಂಡಿದ್ದು, ವಾಹನಗಳನ್ನು ಓವರ್‌ಟೇಕ್ ಮಾಡುವಾಗ ಎರಡು ಚಕ್ರದ ವಾಹನಗಳ ಚಕ್ರಗಳಿಗೆ ಸಿಲುಕುವ ಭೀತಿ ಎದುರಾಗಿದೆ. ಇದರಿಂದಾಗಿ ಸವಾರರು ನಿಯಂತ್ರಣ ಕಳೆದುಕೊಂಡು ಪ್ರಾಣಾಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. ಇದಲ್ಲದೆ, ಈ ಮರಗಳ ಆಳವಾದ ಬೇರುಗಳು ಸೇತುವೆಯ ಸಿಮೆಂಟ್ ಮತ್ತು ಕಾಂಕ್ರೀಟ್ ರಚನೆಯನ್ನು ದುರ್ಬಲಗೊಳಿಸುತ್ತಿದ್ದು, ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಸಂತೋಷ್ ಆರ್. ದರೇಕರ್ ಅವರು ಸ್ಮಾರ್ಟ್ ಸಿಟಿ ಬೆಳಗಾವಿ ಮತ್ತು ಬೆಳಗಾವಿ ಮಹಾನಗರ ಪಾಲಿಕೆಗೆ ತುರ್ತು ಪತ್ರ ಬರೆದಿದ್ದು, ಯಾವುದೇ ದೊಡ್ಡ ಅನಾಹುತ ಸಂಭವಿಸುವ ಮುನ್ನ ತಕ್ಷಣವೇ ಈ ಸಸ್ಯಗಳನ್ನು ತೆರವುಗೊಳಿಸಿ, ಸಾರ್ವಜನಿಕರ ಜೀವ ರಕ್ಷಿಸಬೇಕೆಂದು ಕಳಕಳಿಯ ವಿನಂತಿ ಮಾಡಿದ್ದಾರೆ.

Tags:

error: Content is protected !!