ದಕ್ಷಿಣ ಕಾಶಿ ಅಂತಾ ಖ್ಯಾತಿ ಪಡೆದಿರುವ ಬೆಳಗಾವಿ ಐತಿಹಾಸಿಕ ಕಪಿಲೇಶ್ವರ ದೇವಸ್ಥಾನದಲ್ಲಿ ಇನ್ಮುಂದೆ ಹಾಫ್ ಪ್ಯಾಂಟ್, ನೈಟಿ ಧರಿಸಿ ಬರುವಂತಿಲ್ಲ. ಸಾಂಪ್ರದಾಯಿಕ ಉಡುಗೆ ತೊಟ್ಟು ಬಂದರೆ ಮಾತ್ರ ದೇವಸ್ಥಾನಕ್ಕೆ ಪ್ರವೇಶ ನೀಡಲಾಗುತ್ತಿದೆ. ಈ ಬಗ್ಗೆ ದೇವಸ್ಥಾನ ಸಮಿತಿ ಆದೇಶ ಹೊರಡಿಸಿದ್ದು, ಯಾವ ಉಡುಗೆ ತೊಡಬೇಕು, ಯಾವುದು ತೊಡಬಾರದು ಎಂಬ ಫಲಕವನ್ನು ಪ್ರವೇಶ ದ್ವಾರದಲ್ಲಿ ಅಳವಡಿಸಲಾಗಿದೆ.

ಪುರುಷರು ಹಾಫ್ ಪ್ಯಾಂಟ್, ಮಹಿಳೆಯರು ಗೌನ್ ಹಾಗೂ ಫ್ಯಾನ್ಸಿ ತುಂಡುಡುಗೆ ತೊಟ್ಟು ಬರುವಂತಿಲ್ಲ. ಮಹಿಳೆಯರು ಸೀರೆ ಹೊರತುಪಡಿಸಿ, ಬೇರೆ ಯಾವುದೇ ಉಡುಗೆ ತೊಟ್ಟಿದ್ದರೂ ದುಪ್ಪಟ್ಟಾ ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ದೇವಸ್ಥಾನ ಪ್ರವೇಶದ್ವಾರದಲ್ಲಿ ಅಳವಡಿಸಿರುವ ಫಲಕದಲ್ಲಿ ಸ್ಷಷ್ಟವಾಗಿ ಸೂಚಿಸಲಾಗಿದೆ.

ನಿತ್ಯವೂ ಸಾವಿರಾರು ಭಕ್ತಾದಿಗಳು ಭೇಟಿ ನೀಡುವ ದೇವಸ್ಥಾನಕ್ಕೆ ಪ್ರತಿ ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಶಿವರಾತ್ರಿ ಸೇರಿ ಮತ್ತಿತರ ವಿಶೇಷ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಕಪಿಲೇಶ್ವರನ ದರ್ಶನ ಪಡೆಯಲು ಮುಗಿ ಬೀಳುತ್ತಾರೆ. ಆದರೆ, ಹೀಗೆ ಬರುವ ಕೆಲ ಭಕ್ತರು ಪಾಶ್ಚಿಮಾತ್ಯ ಬಟ್ಟೆ ತೊಟ್ಟು ಮುಜುಗರ ತರಿಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ದೇವಸ್ಥಾನ ಸಮಿತಿ ಇದೇ ಏಪ್ರೀಲ್ 1ರಿಂದ ಪ್ರಾಯೋಗಿಕವಾಗಿ ವಸ್ತ್ರನೀತಿ ಸಂಹಿತೆ ಜಾರಿ ಮಾಡಿದೆ.
ಕಪಿಲೇಶ್ವರ ದೇವಸ್ಥಾನದಲ್ಲಿ ಗೋವಾ ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳಿಗೆ ಹೋಗಿ ಬರುವ ಭಕ್ತರು, ತಮ್ಮೂರು ಮತ್ತು ಮನೆಗಳಿಗೆ ತೆರಳುವ ಮುನ್ನ ಕೆಲವು ಪ್ರವಾಸಿಗರು ಹಾಫ್ ಪ್ಯಾಂಟ್ ಧರಿಸಿ ದೇವಸ್ಥಾನದೊಳಗೆ ಪ್ರವೇಶಿಸುತ್ತಿದ್ದಾರೆ. ಸುತ್ತಮುತ್ತಲಿನ ಮನೆಗಳ ಮಹಿಳೆಯರು, ಬೆಳಗ್ಗೆ ಸ್ನಾನ ಮಾಡಿದ ತಕ್ಷಣ ಗೌನ್ ಧರಿಸಿ ದೇವರ ದರ್ಶನ ಪಡೆಯುವುದು ಸಾಮಾನ್ಯವಾಗಿದೆ.
ಒಟ್ಟಿನಲ್ಲಿ ದೇವಸ್ಥಾನಕ್ಕೆ ಭಕ್ತಾದಿಗಳು ತಮ್ಮ ಮನಸ್ಸಿಗೆ ತಿಳಿದಂತ ಬಟ್ಟೆ ಹಾಕಿಕೊಂಡು ಬರುತ್ತಿದ್ದರು. ಅಲ್ಲದೇ ದೇವಸ್ಥಾನ ಆವರಣದಲ್ಲಿನ ಶಿವನ ಮೂರ್ತಿ ಮುಂದೆ ಪಾಶ್ಚಿಮಾತ್ಯ ಬಟ್ಟೆಗಳನ್ನು ಧರಿಸಿ, ರೀಲ್ಸ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿತ್ತು. ಇದೆಲ್ಲದಕ್ಕೂ ಕಡಿವಾಣ ಹಾಕುವ ನಿಟ್ಟಿನಲ್ಲಿ ವಸ್ತ್ರನೀತಿ ಸಂಹಿತೆಗೆ ದೇವಸ್ಥಾನ ಆಡಳಿತ ಮಂಡಳಿ ಮುಂದಾಗಿದೆ.
