BELAGAVI

ಕನ್ನಡ ಪರ ಗೊತ್ತುವಳಿ ವರದಿ ಸಲ್ಲಿಕೆಗೆ ಆಗ್ರಹ: ಗಡಿನಾಡು ಕನ್ನಡಿಗರ ಸೇನೆ ಹಾಗೂ ಕರವೇ

Share

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಸ್ವೀಕರಿಸುವ ಸಂಬಂಧ ಕನ್ನಡ ಸಂಘಟನೆಗಳು ನಡೆಸುತ್ತಿರುವ ಹೋರಾಟ ಮತ್ತೊಂದು ಹಂತಕ್ಕೆ ತಲುಪಿದೆ. ಈ ಕುರಿತು ಪ್ರಾದೇಶಿಕ ಆಯುಕ್ತರು ಕೇಳಿರುವ ಸಮಗ್ರ ವರದಿಯನ್ನು ತಕ್ಷಣವೇ ಸಲ್ಲಿಸುವಂತೆ ಆಗ್ರಹಿಸಿ ಕನ್ನಡ ಹೋರಾಟಗಾರರಾದ ಬಲರಾಮ ಮಾಸೇನಟ್ಟಿ ಹಾಗೂ ವಾಜಿದ್ ಹಿರೆಕೋಡಿ ನೇತೃತ್ವದಲ್ಲಿ ಶುಕ್ರವಾರ ಪಾಲಿಕೆಗೆ ಮಹತ್ವದ ಮನವಿ ಸಲ್ಲಿಸಲಾಯಿತು.

ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಸ್ವೀಕರಿಸುವ ಸಂಬಂಧ ಕಳೆದ ಮಾರ್ಚ್ 26 ರಿಂದ ಕನ್ನಡ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಪ್ರಾದೇಶಿಕ ಆಯುಕ್ತರು, ಪಾಲಿಕೆಯ ಆಯುಕ್ತರಿಂದ ಸಮಗ್ರವಾದ ವರದಿಯೊಂದನ್ನು ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷರಾದ ಬಲರಾಮ ಮಾಸೇನಟ್ಟಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷರಾದ ವಾಜಿದ್ ಹಿರೆಕೋಡಿ ಅವರ ನೇತೃತ್ವದ ನಿಯೋಗವು ಶುಕ್ರವಾರ ಮುಂಜಾನೆ ಪಾಲಿಕೆ ಕಚೇರಿಗೆ ಧಾವಿಸಿ ಆಯುಕ್ತರಿಗೆ ಮನವಿ ಸಲ್ಲಿಸಿತು. ಈ ವೇಳೆ ಪಾಲಿಕೆ ಆಯುಕ್ತರ ಅನುಪಸ್ಥಿತಿಯಲ್ಲಿ ಉಪ ಆಯುಕ್ತರಾದ ಶ್ರೀ ಸಿದ್ದು ಹುಲ್ಲೋಳಿ ಅವರು ಕನ್ನಡ ಹೋರಾಟಗಾರರಿಂದ ಅಧಿಕೃತವಾಗಿ ಮನವಿ ಪತ್ರವನ್ನು ಸ್ವೀಕರಿಸಿದರು.

ಕಳೆದ ಮೂರು ತಿಂಗಳಿಂದ ನಡೆದಿರುವ ಹಂತ ಹಂತದ ಘಟನಾವಳಿಗಳನ್ನು ಒಳಗೊಂಡ ವರದಿಯನ್ನು ಪ್ರಾದೇಶಿಕ ಆಯುಕ್ತರಿಗೆ ತಕ್ಷಣವೇ ಸಲ್ಲಿಸಬೇಕೆಂದು ಕನ್ನಡ ಮುಖಂಡರು ಒತ್ತಾಯಿಸಿದ್ದಾರೆ. ಕಳೆದ ಮಾರ್ಚ್ ತಿಂಗಳಿಂದ ನಡೆದ ಹೋರಾಟದ ವಿವರಗಳು ಮಾತ್ರವಲ್ಲದೆ, ಇತಿಹಾಸದ ಪ್ರಮುಖ ಉಲ್ಲೇಖಗಳನ್ನು ದಾಖಲಿಸಲಾಗಿದೆ. ವಿಶೇಷವಾಗಿ 2005 ರಲ್ಲಿ ಎಂಇಎಸ್ (MES) ಬಹುಮತದ ಪಾಲಿಕೆಯು ಅಂದು ಸ್ವೀಕರಿಸಿದ್ದ ಮಹಾರಾಷ್ಟ್ರ ಪರ ಗೊತ್ತುವಳಿ ಹಾಗೂ ಈ ಇಡೀ ಪ್ರಕ್ರಿಯೆಯ ಕುರಿತು ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿಗಳಾದ ಮೋಹನ ಕಾತರಕಿ ಅವರು ನೀಡಿರುವ ಅತ್ಯಂತ ಪ್ರಮುಖ ಕಾನೂನಾತ್ಮಕ ಅಭಿಪ್ರಾಯವನ್ನು ಸಹ ಮನವಿ ಪತ್ರದಲ್ಲಿ ಸುದೀರ್ಘವಾಗಿ ಉಲ್ಲೇಖಿಸಿ, ಕರ್ನಾಟಕ ಪರ ವರದಿ ನೀಡುವಂತೆ ಕಟ್ಟುನಿಟ್ಟಿನ ಆಗ್ರಹಿಸಲಾಯಿತು.

Tags:

error: Content is protected !!