Belagavi

ಬೆಳಗಾವಿ ಜಲಸಂಕಟ ನಿವಾರಣೆಗೆ ಯತ್ನ : ಟ್ಯಾಂಕರ್ ಮೂಲಕ ನೀರು

Share

ಬೆಳಗಾವಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಸಮಸ್ಯೆಗೆ ಶಾಶ್ವತ ಹಾಗೂ ಪರ್ಯಾಯ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳು ಕಣಕ್ಕಿಳಿದಿದ್ದಾರೆ. ಈ ಮಧ್ಯೆ ನಗರದ ಪ್ರಮುಖ ಸಂಚಾರ ದಟ್ಟಣೆ ನಿವಾರಣೆಗೆ ರೈಲ್ವೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣದ ಕುರಿತೂ ಮಹತ್ವದ ಮಾತುಕತೆಗಳು ನಡೆದಿವೆ ಎಂದು ಶಾಸಕ ಅಭಯ್ ಪಾಟೀಲ್ ಅವರು ತಿಳಿಸಿದರು.

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರು ಮಹಾಪೌರರು, ಉಪ ಮಹಾಪೌರರು ಹಾಗೂ ನಗರ ಸೇವಕರನ್ನೊಳಗೊಂಡ ಜಂಟಿ ತಂಡದೊಂದಿಗೆ ರಾಕಸಕೊಪ್ಪ ಜಲಾಶಯಕ್ಕೆ ಭೇಟಿ ನೀಡಿ ಸದ್ಯದ ನೀರಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರು. ಈ ವೇಳೆ ಮಾತನಾಡಿದ ಶಾಸಕರು, ನಗರದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿರುವುದು ನಿಜ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಗಂಭೀರ ವಿಚಾರಣೆ ನಡೆಸಲಾಗುತ್ತಿದೆ ಎಂದರು. ಸಾರ್ವಜನಿಕರಿಗೆ ತೊಂದರೆಯಾಗದಂತೆ ತಕ್ಷಣಕ್ಕೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಚಿಂತನೆ ನಡೆಸಲಾಗಿದ್ದು, ಇದರೊಂದಿಗೆ ನಗರದಾದ್ಯಂತ ಸುಮಾರು 53 ಹೊಸ ಬೋರ್‌ವೆಲ್‌ಗಳನ್ನು ಕೊರೆಸುವ ಮೂಲಕ ಜಲಕ್ಷಾಮಕ್ಕೆ ಮುಕ್ತಿ ಹಾಡಲಾಗುವುದು ಎಂದು ಭರವಸೆ ನೀಡಿದರು.

ನೀರಿನ ಸಮಸ್ಯೆಯ ಜೊತೆ ಜೊತೆಗೆ ಬೆಳಗಾವಿಯ ಬಹುದಿನಗಳ ಬೇಡಿಕೆಯಾದ ‘ರೈಲ್ವೆ ಎಲಿವೇಟೆಡ್ ಕಾರಿಡಾರ್’ ನಿರ್ಮಾಣದ ಕುರಿತು ಶಾಸಕರು ಪ್ರಸ್ತಾಪಿಸಿದರು. ಈ ಬೃಹತ್ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಸಂಸದ ಜಗದೀಶ್ ಶೆಟ್ಟರ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ಅವರು ತಿಳಿಸಿದರು. ಶೀಘ್ರದಲ್ಲೇ ಕೇಂದ್ರ ರೈಲ್ವೆ ಸಚಿವರ ಭೇಟಿಗೆ ಸಮಯ ನಿಗದಿಪಡಿಸಿಕೊಂಡು, ನವದೆಹಲಿಯಲ್ಲಿ ಅವರನ್ನು ಖುದ್ದಾಗಿ ಭೇಟಿಯಾಗಿ ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಅಭಯ್ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

Tags:

error: Content is protected !!