ಬೆಳಗಾವಿಯಲ್ಲಿ ಇಂದು ಪರಿಸರ ಮತ್ತು ಆರೋಗ್ಯದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೃಹತ್ ಸೈಕಲ್ ರ್ಯಾಲಿಯೊಂದನ್ನು ಆಯೋಜಿಸಲಾಗಿತ್ತು. ‘ಅಸ್ಮಿತಾ ಸೈಕಲ್ ಲೀಗ್’ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ರ್ಯಾಲಿಗೆ ಸೈಕಲ್ ಪ್ರೇಮಿಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ನೂರಾರು ಮಹಿಳೆಯರು ಸಾಥ್ ನೀಡಿದ್ದಾರೆ.

ವಿಶ್ವ ಬೈಸಿಕಲ್ ದಿನಾಚರಣೆಯ ಅಂಗವಾಗಿ ಇಂದು ಅಸ್ಮಿತಾ ಸೈಕಲ್ ಲೀಗ್ ವತಿಯಿಂದ ಬೆಳಗಾವಿಯಲ್ಲಿ ಬೃಹತ್ ಸೈಕಲ್ ರ್ಯಾಲಿಯನ್ನು ಆಯೋಜಿಸಲಾಗಿತ್ತು. ನಗರದ ಹನುಮಾನ್ ನಗರ ಸರ್ಕಲ್‌ನಿಂದ ಕುವೆಂಪು ನಗರದವರೆಗೆ ನಡೆದ ಈ ಜಾಗೃತಿ ರ್ಯಾಲಿಗೆ ಗಣ್ಯರಾದ ಅನಿಲ್ ಪೋತದಾರ್, ಮಾಜಿ ಎಂ.ಎಲ್.ಸಿ ವಿವೇಕರಾವ್ ಪಾಟೀಲ್ ಹಾಗೂ ಡಿಡಿಪಿಐ ಲೀಲಾವತಿ ಹಿರೇಮಠ ಅವರು ಜಂಟಿಯಾಗಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಯೋಗ ದಿನವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಮಾದರಿಯಲ್ಲೇ ಈ ವಿಶ್ವ ಬೈಸಿಕಲ್ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಮುನ್ನೂರಕ್ಕೂ ಹೆಚ್ಚು ಸೈಕಲ್ ಪ್ರೇಮಿಗಳು ಪಾಲ್ಗೊಂಡಿದ್ದರು. ಇದರಲ್ಲಿ ವಿಶೇಷವಾಗಿ ನೂರಕ್ಕೂ ಹೆಚ್ಚು ಮಹಿಳಾ ಸ್ಪರ್ಧಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಸಾರ್ವಜನಿಕರಲ್ಲಿ ಆರೋಗ್ಯದ ಜಾಗೃತಿ ಮೂಡಿಸಿದ್ದು ಗಮನ ಸೆಳೆಯಿತು.
ಈ ವಿಶೇಷ ಬೈಸಿಕಲ್ ದಿನಾಚರಣೆಯ ಹಿನ್ನೆಲೆಯಲ್ಲಿ ಕೋಕೋ ಬ್ರ್ಯಾಂಡ್ ಟೀಂ 24 ಕನ್ಸ್ಯೂಮರ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸೈಕಲ್ ಸವಾರರಿಗೆ ಹೆಲ್ದಿ ಡ್ರಿಂಕ್ ಅನ್ನು ಪ್ರಾಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು 500ಕ್ಕೂ ಹೆಚ್ಚು ಜನರಿಗೆ ಈ ಆರೋಗ್ಯಕರ ಪೇಯವನ್ನು ವಿತರಿಸಲಾಯಿತು.

ಮಾಜಿ ಎಂ.ಎಲ್.ಸಿ ವಿವೇಕರಾವ್ ಪಾಟೀಲ್ ಅವರು ಸುಮಾರು 300ಕ್ಕೂ ಹೆಚ್ಚು ಜನರು ಇದರಲ್ಲಿ ಭಾಗಿಯಾಗಿದ್ಧಾರೆ. ಪಿಎಂ ಮೋದಿ ಅವರು ವಿಶ್ವ ಯೋಗಾದಿನವನ್ನು ಘೋಷಿಸಿದ ಮಾದರಿಯಲ್ಲೇ ವಿಶ್ವ ಬೈಸಿಕಲ್ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಸೈಕಲ್ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 300 ಕ್ಕೂ ಹೆಚ್ಚು ಸ್ಪರ್ಧಿಗಳಲ್ಲಿ 100ಕ್ಕೂ ಹೆಚ್ಚು ಮಹಿಳೆಯರೇ ಉತ್ಸಾಹದಿಂದ ಭಾಗಿಯಾಗಿದ್ದಾರೆ. ಈ ಮೂಲಕ ಜನರಲ್ಲಿ ಸೈಕಲ್ ಕುರಿತು ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಸ್ಥಳೀಯ ಕ್ರೀಡಾಪಟುಗಳು ಮತ್ತು ಸೈಕಲ್ ಪ್ರೇಮಿಗಳು ಒಲಿಂಪಿಕ್ಸ್ ಸೇರಿದಂತೆ ಜಾಗತಿಕ ಮಟ್ಟದ ಬೃಹತ್ ಸ್ಪರ್ಧೆಗಳಲ್ಲಿ ಭಾಗವಹಿಸುವಂತಾಗಬೇಕು, ಅದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಒಟ್ಟಾರೆ, ಕುಂದಾನಗರಿಯ ರಸ್ತೆಗಳಲ್ಲಿ ಸೈಕಲ್ ಸವಾರರ ದಂಡು ಜಾಗೃತಿಯ ಸಂದೇಶ ಸಾರುತ್ತಾ ಸಾಗಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
