air force

ವಾಯುಪಡೆಗೆ ಸೇರ್ಪಡೆಯಾದ 1250 ಅಗ್ನಿವೀರರು ಸಾಂಬ್ರಾ ಆಕಾಶದಲ್ಲಿ ಸಾರಂಗ್ ಹೆಲಿಕಾಪ್ಟರ್‌ಗಳ ರೌದ್ರಾವತಾರ, ಕಣ್ಮನ ಸೆಳೆದ ಏರ್ ಶೋ!

Share

ಬೆಳಗಾವಿಯ ಸಾಂಬ್ರಾ ವಾಯುಪಡೆ ತರಬೇತಿ ಶಾಲೆಯಲ್ಲಿ ದೇಶದ ರಕ್ಷಣಾ ಪಡೆಗೆ ಹೊಸ ಶಕ್ತಿ ತುಂಬುವ ಅದ್ಭುತ ಕ್ಷಣಗಳು ಸಾಕ್ಷಿಯಾದವು. ಸತತ 22 ವಾರಗಳ ಕಠಿಣ ತರಬೇತಿ ಮುಗಿಸಿದ ವಾಯುಪಡೆ ಅಗ್ನಿವೀರರ 7ನೇ ತಂಡದ ಭವ್ಯ ನಿರ್ಗಮನ ಪಥಸಂಚಲನ ಇಂದು ಜರುಗಿತು. ಇನ್ನು ಇದೇ ವೇಳೆ ಆಕಾಶದಲ್ಲಿ ಭಾರತೀಯ ವಾಯುಸೇನೆಯ ವಿಶ್ವವಿಖ್ಯಾತ ‘ಸಾರಂಗ್’ ಹೆಲಿಕಾಪ್ಟರ್ ತಂಡ ನಡೆಸಿದ ಸಾಹಸಮಯ ಏರ್ ಶೋ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.

ಹೌದು.. ಬೆಳಗಾವಿಯ ಸಾಂಬ್ರಾದಲ್ಲಿರುವ ಭಾರತೀಯ ವಾಯುಪಡೆಯ ತರಬೇತಿ ಕೇಂದ್ರ ಇಂದು ದೇಶಭಕ್ತಿಯ ಜಯಘೋಷದೊಂದಿಗೆ ಮಿಂದೆದ್ದಿತು. ಸತತ 22 ವಾರಗಳ ಕಾಲ ಅತ್ಯಂತ ಕಠಿಣ ಹಾಗೂ ಪರಿಣಾಮಕಾರಿ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ, 7ನೇ ತಂಡದ ಬರೋಬ್ಬರಿ 1 ಸಾವಿರದ 250 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಇಂದು ಅದ್ಧೂರಿಯಾಗಿ ಜರುಗಿತು. ಕಮಾಂಡಿಂಗ್ ಅಧಿಕಾರಿ ಜಿಪಿ‌ ಕ್ಯಾಪ್ಟನ್ ಅಭಿಜೀತ್ ಕುಮಾರ ಅವರು ವಾಯುಪಡೆ ಅಗ್ನಿವೀರರ ಈ ಆಕರ್ಷಕ ಪಥ ಸಂಚಲನವನ್ನು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು. ಇದೇ ವೇಳೆ ತರಬೇತಿಯ ಸಂದರ್ಭದಲ್ಲಿ ಅತ್ಯುತ್ತಮ ಪ್ರದರ್ಶನ ಹಾಗೂ ಶಿಸ್ತು ತೋರಿದ ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.

ಇನ್ನು ಪಥಸಂಚಲನದ ಬಳಿಕ ನಡೆದ ಭಾರತೀಯ ವಾಯುಸೇನೆಯ ವಿಶ್ವವಿಖ್ಯಾತ ‘ಸಾರಂಗ್’ ಹೆಲಿಕಾಪ್ಟರ್ ಡಿಸ್ಪ್ಲೇ ತಂಡದ ವೈಮಾನಿಕ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿತ್ತು. ವಿಶ್ವದಲ್ಲೇ ಏಕೈಕ 5 ಹೆಲಿಕಾಪ್ಟರ್ ಡಿಸ್ಪ್ಲೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಸಾರಂಗ್’, ಸ್ವದೇಶಿ ನಿರ್ಮಿತ ಎಎಲ್ಎಚ್ ಧ್ರುವ ಹೆಲಿಕಾಪ್ಟರ್‌ಗಳನ್ನು ಬಳಸಿ ಸಾಂಬ್ರಾ ಆಕಾಶದಲ್ಲಿ ನಡೆಸಿದ ನಾನಾ ರೀತಿಯ ಸಾಹಸಮಯ ಕಸರತ್ತುಗಳು ನೋಡುಗರನ್ನು ಬೆರಗುಗೊಳಿಸಿದವು. ಮುಗಿಲ ಹಾದಿಯಲ್ಲಿ ಹೆಲಿಕಾಪ್ಟರ್‌ಗಳು ಸೃಷ್ಟಿಸಿದ ವಿಭಿನ್ನ ಚಿತ್ತಾರಗಳು ಭಾರತೀಯ ಸೇನೆಯ ಶಕ್ತಿಯನ್ನು ಜಗತ್ತಿಗೆ ಸಾರುವಂತಿದ್ದವು.

ಕಾರ್ಯಕ್ರಮದಲ್ಲಿ ಮಾತನಾಡಿದ ಏರ್ ಕಮಾಂಡರ್ ಸೂರಜ್ ಶಂಕರ ಅವರು, ಪ್ರಸ್ತುತ ಸವಾಲಿನ ಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ವಾಯುಪಡೆಯು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ಅಗ್ನಿವೀರರು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು, ದೇಶಸೇವೆಯಲ್ಲಿ ಪ್ರಾಮಾಣಿಕ ಯೋಗದಾನ ನೀಡಬೇಕೆಂದು ಕರೆ ನೀಡಿದರು.

ಒಟ್ಟಿನಲ್ಲಿ ಕಠಿಣ ತರಬೇತಿ ಮುಗಿಸಿ ದೇಶ ಕಾಯಲು ಸಜ್ಜಾಗಿ ನಿಂತಿರುವ ಅಗ್ನಿವೀರರ ಕಣ್ಣುಗಳಲ್ಲಿನ ದೇಶಭಕ್ತಿ ಹಾಗೂ ಹೆಲಿಕಾಪ್ಟರ್‌ಗಳ ಗರ್ಜನೆ ಸಾಂಬ್ರಾ ನೆಲದಲ್ಲಿ ಹೊಸ ಇತಿಹಾಸ ಬರೆದಿದೆ.

Tags:

error: Content is protected !!