• ವಿಜಯಪುರದಲ್ಲಿ ಮಗುವನ್ನು ಎಳೆದೊಯ್ದ ನಾಯಿ ಸೆರೆ
• ಬಾಲಕ ವಿರಾಜ್ ಮೇಲೆ ದಾಳಿ ಮಾಡಿದ್ದ ಶ್ವಾನ ಬಲೆಗೆ
• ನೂರು ಅಡಿ ಎಳೆದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
• ಪಾಲಿಕೆ ಕಾರ್ಯಾಚರಣೆ ಕಂಡು ನಿಟ್ಟುಸಿರು ಬಿಟ್ಟ ಜನರು

ವಿಜಯಪುರದಲ್ಲಿ ಮೂರು ವರ್ಷದ ಹಸುಗೂಸಿನ ಮೇಲೆ ದಾಳಿ ಮಾಡಿ, ನೂರು ಅಡಿ ದೂರ ಎಳೆದೊಯ್ದಿದ್ದ ಭಯಾನಕ ಬೀದಿ ನಾಯಿ ಕೊನೆಗೂ ಪಾಲಿಕೆ ಸಿಬ್ಬಂದಿ ಬಲೆಗೆ ಬಿದ್ದಿದೆ. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಈ ಮೈ ಜುಂ ಎನಿಸುವ ದೃಶ್ಯ ಕಂಡು ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು.
ವಿಜಯಪುರ ನಗರದ ರಾಜಕುಮಾರ್ ಲೇಔಟ್ನಲ್ಲಿ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಈ ಘೋರ ಘಟನೆ ಸಂಭವಿಸಿದೆ. ಮನೆಯ ಮುಂದೆ ಆಟವಾಡುತ್ತಿದ್ದ ವಿರಾಜ್ ಬಿರಾದಾರ (3) ಎಂಬ ಪುಟ್ಟ ಬಾಲಕನ ಮೇಲೆ ಏಕಾಏಕಿ ಎರಗಿದ ಬೀದಿ ನಾಯಿ, ಬಾಲಕನನ್ನು ಬಾಯಿಯಲ್ಲಿ ಕಚ್ಚಿ ಸುಮಾರು 100 ಅಡಿ ದೂರದವರೆಗೆ ಎಳೆದೊಯ್ದಿದೆ. ಸ್ಥಳೀಯರು ತಕ್ಷಣವೇ ಧಾವಿಸಿ ಬಾಲಕನನ್ನು ರಕ್ಷಿಸಿದ್ದರಿಂದ ಪ್ರಾಣಾಪಾಯ ತಪ್ಪಿದೆ. ಸದ್ಯ ಬೆನ್ನು ಮತ್ತು ತೊಡೆಯ ಭಾಗಕ್ಕೆ ತೀವ್ರ ಗಾಯಗಳಾಗಿರುವ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ವಿಜಯಪುರ ಮಹಾನಗರ ಪಾಲಿಕೆ ಅಧಿಕಾರಿಗಳು ತಕ್ಷಣವೇ ಕಾರ್ಯಾಚರಣೆಗೆ ಇಳಿದಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ವಿಶೇಷ ತಂಡದೊಂದಿಗೆ ಕಾರ್ಯಾಚರಣೆ ನಡೆಸಿದ ಪಾಲಿಕೆ ಸಿಬ್ಬಂದಿ, ಬಾಲಕನ ಮೇಲೆ ದಾಳಿ ಮಾಡಿದ್ದ ಆ “ಡೆಡ್ಲಿ” ನಾಯಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬೀದಿ ನಾಯಿಗಳ ಕಾಟದಿಂದ ರೋಸಿ ಹೋಗಿರುವ ಸಾರ್ವಜನಿಕರು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದು, ನಗರದಾದ್ಯಂತ ಬೀದಿ ನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
