ಗಡಿ ಜಿಲ್ಲೆ ಬೆಳಗಾವಿಯ ವಡಗಾವ ಯಳ್ಳೂರು ರಸ್ತೆಯಲ್ಲಿ ನೆಲೆಸಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ವಾರ್ಷಿಕ ಮಹೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ಆರಂಭಗೊಂಡಿದೆ. ಉಡುಪಿ ಉಚ್ಚಿಲದ ಪ್ರಖ್ಯಾತ ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ಮೇ 22 ರಿಂದ ಮೂರು ದಿನಗಳ ಕಾಲ ಜರುಗಲಿರುವ ಈ ಧಾರ್ಮಿಕ ಉತ್ಸವದಲ್ಲಿ ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.


ಬೆಳಗಾವಿಯ ವಡಗಾವ ಯಳ್ಳೂರು ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ವಾರ್ಷಿಕ ಮಹೋತ್ಸವದ ಅಂಗವಾಗಿ ಮೇ 22 ರಂದು ಸಂಜೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಉಡುಪಿ ಉಚ್ಚಿಲದ ಶ್ರೀ ವಿಶ್ವನಾಥ ಜೋಯಿಸರ ನೇತೃತ್ವದಲ್ಲಿ ದೇವಸ್ಥಾನದ ಆವರಣದಲ್ಲಿ ಪ್ರಾರ್ಥನೆ, ವಾಸ್ತು ಶುದ್ಧಿ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ವಾಸ್ತು ಬಲಿ ಹಾಗೂ ಸುದರ್ಶನ ಹೋಮಗಳು ಭಕ್ತಿಭಾವದಿಂದ ನೆರವೇರಿದವು.


ಇನ್ನು ಮಹೋತ್ಸವದ ಎರಡನೇ ದಿನವಾದ ಮೇ 23 ರಂದು ಮುಂಜಾನೆಯಿಂದಲೇ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಶ್ರೀ ಅನ್ನಪೂರ್ಣೇಶ್ವರಿ ದೇವಿ ಹಾಗೂ ಪರಿವಾರ ದೇವರಿಗೆ ಕಲಶಾಭಿಷೇಕ, ಪುಣ್ಯಾಹವಾಚನ, ಗಣಹೋಮ ಮತ್ತು ನವಗ್ರಹ ಹೋಮಗಳು ನಡೆದವು. ತದನಂತರ ಬೆಳಗ್ಗೆ 10 ಗಂಟೆಗೆ ಅನ್ನಪೂರ್ಣೇಶ್ವರಿ ಯಾಗ, ಮಹಾಪೂಜೆ ಹಾಗೂ ಪ್ರಸನ್ನ ಪೂಜೆ ನೆರವೇರಿದ್ದು, ಸಂಜೆ ಶ್ರೀ ದೇವಿಯ ಭವ್ಯ ಪಲ್ಲಕಿ ಮೆರವಣಿಗೆ, ರಂಗ ಪೂಜೆ ಹಾಗೂ ದೀಪೋತ್ಸವ ಕಾರ್ಯಕ್ರಮಗಳು ಜರುಗಿದವು. ಮೇ 24 ರಂದು ಬೆಳಗ್ಗೆ ಸಂಪ್ರೋಕ್ಷಣೆ, ಸುಬ್ರಮಣ್ಯ ದೇವರಿಗೆ ಅಶ್ಲೇಷಾ ಬಲಿ ಪೂಜೆ, ಮಹಾಚಂಡಿಕಾ ಹೋಮ ಹಾಗೂ ಮಧ್ಯಾಹ್ನ ಮಹಾಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ರವಿರಾಜ ಹೆಗ್ಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
