ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಆರು ವರ್ಷದ ಬಾಲಕಿ ಸೇರಿದಂತೆ ಇಬ್ಬರ ಮೇಲೆ ನಡೆದ ಭೀಕರ ಶ್ವಾನ ದಾಳಿಗೆ ನಮ್ಮ ವಾಹಿನಿ ಧ್ವನಿಯಾಗಿತ್ತು. ವರದಿಯ ಬೆನ್ನಲ್ಲೇ ಎಚ್ಚೆತ್ತ ನಗರಸಭೆ ಅಧಿಕಾರಿಗಳು, ಇದೀಗ ಉತ್ತರ ಪ್ರದೇಶದ ತಜ್ಞರ ತಂಡದೊಂದಿಗೆ ಬೀದಿ ನಾಯಿಗಳ ಸೆರೆಗೆ ಬೃಹತ್ ಕಾರ್ಯಾಚರಣೆ ಆರಂಭಿಸಿದ್ದಾರೆ.

ಇಳಕಲ್ ನಗರದ 2ನೇ ವಾರ್ಡ್ ಕುಲಕರ್ಣಿ ಪೇಟೆಯಲ್ಲಿ 6 ವರ್ಷದ ಬಾಲಕಿ ಶ್ರೀನಿಧಿ ಹಾಗೂ 40 ವರ್ಷದ ಯಾಸೀನ್ ಎಂಬುವವರ ಮೇಲೆ ಬೀದಿನಾಯಿಗಳು ರಕ್ತಸಿಕ್ತ ದಾಳಿ ಮಾಡಿದ್ದವು. ಈ ಕುರಿತು ನಮ್ಮ ವಾಹಿನಿಯಲ್ಲಿ ಸವಿಸ್ತಾರವಾಗಿ ವರದಿ ಪ್ರಸಾರವಾಗುತ್ತಿದ್ದಂತೆ ನಿದ್ದೆಯಿಂದ ಎದ್ದಿರುವ ನಗರಸಭೆ ಅಧಿಕಾರಿಗಳು, ತಕ್ಷಣವೇ ಟೆಂಡರ್ ಪ್ರಕ್ರಿಯೆ ಪೂರೈಸಿ ಉತ್ತರ ಪ್ರದೇಶದ ವಿಶೇಷ ‘ಅನಿಮಲ್ ರೆಸ್ಕ್ಯೂ’ ತಂಡವನ್ನು ಕರೆಸಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ತೀವ್ರಗೊಳಿಸಿರುವ ತಂಡವು ಲೇಔಟ್‌ಗಳಲ್ಲಿ ಭಯ ಹುಟ್ಟಿಸಿದ್ದ 100ಕ್ಕೂ ಹೆಚ್ಚು ಬೀದಿನಾಯಿಗಳನ್ನು ಸೆರೆಹಿಡಿದು ನಗರಸಭೆಯ ವಾಹನಗಳಲ್ಲಿ ಸಾಗಿಸಿದೆ.
ಆದರೆ, ಇಂತಹ ಅನಾಹುತಗಳು ಸಂಭವಿಸಿದಾಗ ಮಾತ್ರ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಸರಿಯಲ್ಲ ಎಂಬುದು ಸ್ಥಳೀಯರ ಆಕ್ರೋಶವಾಗಿದೆ. ಇಳಕಲ್ ನಗರಸಭೆಯು ಈ ಕಾರ್ಯಾಚರಣೆಯನ್ನು ಕೇವಲ ತಾತ್ಕಾಲಿಕ ಕ್ರಮವನ್ನಾಗಿ ಮಾಡದೆ, ನಿರಂತರವಾಗಿ ನಡೆಸುವ ಮೂಲಕ ಶ್ವಾನ ಹಾವಳಿಗೆ ಶಾಶ್ವತ ಬ್ರೇಕ್ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸದ್ಯಕ್ಕೆ ಜಿಲ್ಲೆಯ ಜನರಿಗೆ ತಲೆನೋವಾಗಿದ್ದ ಬೀದಿನಾಯಿಗಳ ಹಿಂಡನ್ನು ಮಟ್ಟಹಾಕಲು ಮುಂದಾಗಿರುವ ಅಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

