ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸ್ ಕಿರುಕುಳದಿಂದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ, ವಿದ್ಯಾರ್ಥಿ ಕುಟುಂಬಕ್ಕೆ ಪರಿಹಾರ ನೀಡಲು ವೀರಶೈವ ಆಗ್ರಹ.

ಇತ್ತೀಚೆಗೆ ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಆದಿತ್ಯ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಧಾರವಾಡದ ಜಿಲ್ಲಾಧಿಕಾರಿ ಆರ್ ಸ್ನೇಹಲ್ ಭೇಟಿ ಮಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳು, ವಿದ್ಯಾರ್ಥಿ ಮೇಲೆ ನಗರದ ವಿದ್ಯಾಗಿರಿ ಪೊಲೀಸ್ ಠಾಣಾದವರು ಗಾಂಜಾ ಸೇವಿಸಿದ್ದಾನೆ ಎಂದು ಸುಳ್ಳು ಆರೋಪ ಮಾಡಿ, ಅವನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ. ಬಳಿಕ ವಿದ್ಯಾರ್ಥಿ ಯಾವುದೇ ಗಾಂಜಾ ಡ್ರಗ್ಸ್ ತೆಗೆದುಕೊಂಡಿರುವುದಿಲ್ಲ ಎಂದು ವೈದ್ಯರು ವರದಿ ನೀಡಿದ್ದಾರೆ. ಆದಾಗ್ಯೂ ವಿದ್ಯಾಗಿರಿ ಪೊಲೀಸರು ವಿದ್ಯಾರ್ಥಿಗೆ ಸಾಕಷ್ಟು ಕಿರುಕುಳ ನೀಡಿ ಹಣ ಕೊಡಲು ಒತ್ತಾಯಿಸಿದ್ದರಿಂದ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದ್ದರಿಂದ ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು. ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಕೂಡಲೇ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಸಮಾಜದ ಹಿರಿಯರ ಮತ್ತು ಮಠಾಧೀಶರ ನೇತೃತ್ವದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮನವಿ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
