ನಾಳೆ ನನ್ನ ಹೆಂಡತಿ ಮದುವೆ ಇದೆ, ದಯವಿಟ್ಟು ಅದನ್ನು ನಿಲ್ಲಿಸಿ!” – ಹೀಗಂತ ಬೆಳಗಾವಿಯಲ್ಲಿ ವ್ಯಕ್ತಿಯೊಬ್ಬರು ಕಣ್ಣೀರಿಡುತ್ತಾ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಪ್ರೀತಿಸಿ ಮದುವೆಯಾದ ಪತ್ನಿಯನ್ನು ಮನೆಯವರು ಕೂಡಿಹಾಕಿ, ಈಗ ಮತ್ತೊಬ್ಬನಿಗೆ ಧಾರೆಯೆರೆಯಲು ಸಜ್ಜಾಗಿದ್ದಾರೆ ಎಂಬ ಆಘಾತಕಾರಿ ದೂರು ಕೇಳಿಬಂದಿದೆ.

ಪ್ರೀತಿಸಿ ಮದುವೆಯಾದ ಪತ್ನಿಯನ್ನು ಆಕೆಯ ಮನೆಯವರೇ ಕಿಡ್ನಾಪ್ ಮಾಡಿ, ಈಗ ಮತ್ತೊಂದು ಮದುವೆ ಮಾಡಲು ಹೊರಟಿದ್ದಾರೆ ಎಂದು ವೆಂಕಟೇಶ್ವರ ರಾಠೋಡ್ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ. ಮಂಗಳವಾರ ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, 2016ರಿಂದ ಪರಿಚಯವಿದ್ದ ಮಂಜುಳಾ ಹಂಚಿನಮನಿ ಎಂಬುವವರನ್ನು 2022ರಲ್ಲಿ ಕಾನೂನುಬದ್ಧವಾಗಿ ವಿವಾಹವಾಗಿದ್ದೇನೆ. ಆದರೆ, ಈಗ ಮಂಜುಳಾ ತಂದೆ ರುದ್ರಪ್ಪ ಹಾಗೂ ಸಹೋದರ ಪ್ರದೀಪ್ ಆಕೆಯನ್ನು ಮನೆಯಲ್ಲಿ ಕೂಡಿಹಾಕಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ನಾಳೆಯೇ ಆಕೆಗೆ ಬೇರೊಬ್ಬನ ಜೊತೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೇವಲ ಮದುವೆ ಮಾತ್ರವಲ್ಲದೆ, ತನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಜೈಲಿಗೂ ಕಳುಹಿಸಿದ್ದರು ಎಂದು ವೆಂಕಟೇಶ್ವರ ದೂರಿದ್ದಾರೆ. ಪತ್ನಿಯ ಮನೆಯವರಿಗೆ ಮನೆ ಕಟ್ಟಲು ಲಕ್ಷಾಂತರ ರೂಪಾಯಿ ಹಣ ನೀಡಿದ್ದರೂ, ಈಗ ತನ್ನ ಮೇಲೆ ಹಲ್ಲೆ ನಡೆಸಿ ಬಂಗಾರ ಹಾಗೂ ಹಣ ಸುಲಿಗೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಸಂಬಂಧ ಹಿರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನ್ನ ಸಂಸಾರ ಉಳಿಸಿಕೊಡುವಂತೆ ಮತ್ತು ಅಕ್ರಮವಾಗಿ ನಡೆಯುತ್ತಿರುವ ಮರುಮದುವೆಯನ್ನು ತಕ್ಷಣವೇ ತಡೆಹಿಡಿಯುವಂತೆ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ವೆಂಕಟೇಶ್ವರ ರಾಠೋಡ್ ಮನವಿ ಮಾಡಿದ್ದಾರೆ.
