ಕಮರ್ಷಿಯಲ್ ಗ್ಯಾಸ್ ಸೋರಿಕೆಯಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ. ತಾಳಿಕೋಟೆ ಪಟ್ಟಣದ ಹನುಮಾನ್ ಗುಡಿ ಸಮೀಪದ ಕುಂಬಾರ್ ಹೋಟೆಲ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ.

ಇನ್ನೂ ಹೋಟೆಲ್‌ನಲ್ಲಿ ಬಳಸಲಾಗುತ್ತಿದ್ದ ಟೊಟಲ್ ಕಂಪನಿಯ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ನಿಂದ ರಾತ್ರಿ ವೇಳೆ ಗ್ಯಾಸ್ ಸೋರಿಕೆಯಾಗಿತ್ತು ಎನ್ನಲಾಗಿದೆ. ಬೆಳಿಗ್ಗೆ ಹೋಟೆಲ್ ತೆರೆದ ಮಾಲೀಕ ಶಕೀಲ್ ಕುಂಬಾರವಡಿ ಅವರು ಬೀಡಿ ಹೊತ್ತಿಸಿದಾಗ ಏಕಾಏಕಿ ಗ್ಯಾಸ್‌ಗೆ ಬೆಂಕಿ ತಗುಲಿ ಭಾರೀ ಶಬ್ದದೊಂದಿಗೆ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಹೋಟೆಲ್ ಮಾಲೀಕ ಶಕೀಲ್ ಕುಂಬಾರವಡಿ (36), ಬಸೀರ್ ಕಡಕದಾಳ (42) ಹಾಗೂ ಬತಗುಣಕಿ (60) ಎಂಬುವರು ತೀವ್ರವಾಗಿ ಸುಟ್ಟು ಗಾಯ ಗೊಂಡಿದ್ದಾರೆ. ಗಾಯಾಳುಗಳಿಗೆ ಶೇಕಡಾ 70 ರಷ್ಟು ಸುಟ್ಟ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣವೇ ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

