• ಬೆಳಗಾವಿ ವೀರಭದ್ರನಗರದಲ್ಲಿ ಮಳೆರಾಯನ ಆರ್ಭಟ
• ಕತ್ತಲಲ್ಲೇ ರಾತ್ರಿ ಕಳೆದ ಬಡಾವಣೆಯ ನಿವಾಸಿಗಳು
• ಅಧಿಕಾರಿಗಳ ಮಲತಾಯಿ ಧೋರಣೆಗೆ ತೀವ್ರ ಕಿಡಿ
• ಮನೆಗಳಿಗೆ ನುಗ್ಗಿದ ನೀರು: ಜನರ ಪರದಾಟ

ಕಳೆದ ಸಂಜೆ ಸುರಿದ ಭಾರಿ ಮಳೆಗೆ ಬೆಳಗಾವಿಯ ವೀರಭದ್ರನಗರ ನಲುಗಿ ಹೋಗಿದೆ. ಅಧಿಕಾರಿಗಳ ಮಲತಾಯಿ ಧೋರಣೆ ಹಾಗೂ ಆಮೆಗತಿಯ ಕಾಮಗಾರಿಗಳಿಂದಾಗಿ ಇಡೀ ಬಡಾವಣೆ ಈಗ ನರಕಸದೃಶವಾಗಿ ಮಾರ್ಪಟ್ಟಿದ್ದು, ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.
ಬೆಳಗಾವಿಯ ವೀರಭದ್ರನಗರದ 1ನೇ ಕ್ರಾಸ್ನಲ್ಲಿ ಮಳೆಯ ಆರ್ಭಟಕ್ಕೆ ಮರಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಪರಿಣಾಮವಾಗಿ ಇಡೀ ಬಡಾವಣೆ ರಾತ್ರಿಯಿಡೀ ಕತ್ತಲಲ್ಲಿ ಕಳೆಯುವಂತಾಗಿದೆ. ಡ್ರೈನೇಜ್ ಕಾಮಗಾರಿಗಳು ಅರ್ಧಕ್ಕೆ ನಿಂತಿರುವುದರಿಂದ ಮಳೆ ನೀರು ನೇರವಾಗಿ ಮನೆಗಳಿಗೆ ನುಗ್ಗುತ್ತಿದೆ. ರಸ್ತೆಗಳು ಗುಂಡಿ ಬಿದ್ದು ಕೆಸರು ಗದ್ದೆಯಂತಾಗಿದ್ದು, ಜನರು ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಇಂತಹದ್ದೇ ದುಸ್ಥಿತಿ ಎದುರಾಗುತ್ತಿದ್ದರೂ ಯಾವುದೇ ಅಧಿಕಾರಿಗಳಾಗಲಿ ಅಥವಾ ನಗರಸೇವಕರಾಗಲಿ ಇತ್ತ ಸುಳಿಯದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದು ಅಧಿಕೃತ ಎನ್.ಎ ಲೇಔಟ್ ಆಗಿದ್ದರೂ ಸಹ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸುತ್ತಿವೆ ಎಂಬ ದೂರು ಕೇಳಿಬಂದಿದೆ. ಚರಂಡಿಗಳು ಕಸದಿಂದ ತುಂಬಿ ತುಳುಕುತ್ತಿದ್ದರೂ ಸ್ವಚ್ಛತೆ ಮಾಡುವವರಿಲ್ಲದೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಹಿಂದೊಮ್ಮೆ ಪ್ರವಾಹ ಬಂದಾಗ ಅನುಭವಿಸಿದ ಕಷ್ಟಗಳೇ ಈಗ ಪುನರಾವರ್ತನೆಯಾಗುತ್ತಿದ್ದು, ಕೂಡಲೇ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
