Belagavi

ಕಿತ್ತೂರಿನ ದೇವಗಾಂವದಲ್ಲಿ ಭೀಕರ ಕೊಲೆ: ಮಲಗುವ ವಿಚಾರಕ್ಕೆ ಜಗಳ, ಆರೋಪಿಯ ಬಂಧನ; ಎಸ್ಪಿ ಕೆ. ರಾಮರಾಜನ್

Share

• ದೇವಗಾಂವ ಗ್ರಾಮದಲ್ಲಿ ನಸುಕಿನ ಜಾವ ಕೊಲೆ
• ಕಲ್ಲಿನಿಂದ ಜಜ್ಜಿ ಮಹಾಂತೇಶ ಹುಚ್ಚನವರ ಹತ್ಯೆ
• ಕ್ಷುಲ್ಲಕ ಕಾರಣಕ್ಕೆ ನಡೆದ ಭೀಕರ ಕೃತ್ಯ
• ಕಿತ್ತೂರು ಪೊಲೀಸರಿಂದ ತಕ್ಷಣವೇ ಆರೋಪಿ ಬಂಧನ
ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇವಗಾಂವ ಗ್ರಾಮದಲ್ಲಿ ಬುಧವಾರ ನಸುಕಿನ ಜಾವ ವ್ಯಕ್ತಿಯೊಬ್ಬನ ಭೀಕರ ಕೊಲೆಯಾಗಿದೆ. ಮನೆಯ ಮುಂದೆ ಮಲಗಿದ್ದಕ್ಕೆ ಶುರುವಾದ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಕಿತ್ತೂರು ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.
ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ದಿನಾಂಕ 06-05-2026 ರಂದು ನಸುಕಿನ ಜಾವ ಸುಮಾರು 2:30ಕ್ಕೆ ದೇವಗಾಂವ ಗ್ರಾಮದಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಮೃತ ಮಹಾಂತೇಶ ನಿಂಗಪ್ಪ ಹುಚ್ಚನವರ (52 ವರ್ಷ) ಅವರು ಆರೋಪಿ ಪ್ರಕಾಶ್ ಕಲ್ಲಪ್ಪ ಕಾಳಾರ ಎಂಬುವವರ ಮನೆಯ ಮುಂದೆ ಮಲಗಿದ್ದಾಗ “ನನ್ನ ಮನೆಯಲ್ಲಿ ಏಕೆ ಮಲಗಿದ್ದೀಯಾ?” ಎಂಬ ಜಗಳ ಆರಂಭವಾಗಿದೆ. ಈ ವೇಳೆ ಆರೋಪಿ ಪ್ರಕಾಶ್ ಕಾಳಾರನು ಮಹಾಂತೇಶನನ್ನು ಕೆಡವಿ, ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಿ, ಶವವನ್ನು ರಸ್ತೆಯ ಮೇಲೆ ಎಳೆದೊಯ್ದು ಹಾಕಿದ್ದಾನೆ. ಮೃತರ ಸಂಬಂಧಿಕ ರಾಜು ಪುಂಡಲೀಕ್ ಹುಚ್ಚನವರ ನೀಡಿದ ದೂರಿನ ಮೇರೆಗೆ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಬೈಲಹೊಂಗಲ ಡಿ.ಎಸ್.ಪಿ ಡಾ|| ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಕಿತ್ತೂರು ವೃತ್ತದ ಸಿ.ಪಿ.ಐ ಶಿವಾನಂದ ಬಿ ಗುಡಗನಟ್ಟಿ, ಪಿ.ಎಸ್.ಐ (ಕಾ&ಸು) ಪ್ರವೀಣ ಆರ್ ಗಂಗೋಳ ಹಾಗೂ ಕಿತ್ತೂರು ಠಾಣೆಯ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕ್ಷಿಪ್ರ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ.ರಾಮರಾಜನ್ ಐಪಿಎಸ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್.ಬಿ. ಬಸರಗಿ ಕೆ.ಎಸ್.ಪಿ.ಎಸ್ ಶ್ಲಾಘಿಸಿದ್ದಾರೆ.

Tags:

error: Content is protected !!