bagalkot

ಬಿಸಿಲ ಬೇಗೆಗೆ ಬತ್ತದ ಬಾದಾಮಿ ಚಾಲುಕ್ಯರ ಮಹಾಕೂಟದ ಪುಷ್ಕರಣಿ ಬಿಸಿಲ ಕಾಲದಲ್ಲೂ ಕೈಬೀಸಿ ಕರೆಯುತ್ತಿದೆ ದಕ್ಷಿಣ ಕಾಶಿಯ ಕೂಲ್ ಕೂಲ್ ಹೊಂಡ !!!

Share

BADAMI CHALUKYA MAHAKOOT PUSHKARANI

ರಾಜ್ಯಾದ್ಯಂತ ಸೂರ್ಯನ ರಣಬಿಸಿಲಿಗೆ ನದಿ, ಹಳ್ಳ-ಕೊಳ್ಳಗಳು ಒಣಗಿ ಬರಡಾಗುತ್ತಿವೆ. ಆದರೆ, ಐತಿಹಾಸಿಕ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಮಹಾಕೂಟದಲ್ಲಿ ಮಾತ್ರ ಪ್ರಕೃತಿಯ ಪವಾಡವೊಂದು ನಡೀತಿದೆ. ಸುತ್ತಲೂ ಗುಡ್ಡಗಾಡು, ಧಗಧಗಿಸುವ 40 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೂ, ಇಲ್ಲಿನ ಚಾಲುಕ್ಯರ ಕಾಲದ ಪುಷ್ಕರಣಿ ಮಾತ್ರ ಸದಾ ನೀರಿನಿಂದ ತುಂಬಿ ತುಳುಕುತ್ತಾ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ! ಆ ಕುರಿತ ಒಂದು ವರದಿ ಇಲ್ಲಿದೆ.

ಬಾಗಲಕೋಟೆ: ಚಾಲುಕ್ಯರ ಐತಿಹಾಸಿಕ ನಗರಿ ಬಾದಾಮಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಹಾಕೂಟದ ಪುಷ್ಕರಣಿ (ವಿಷ್ಣುಪುಷ್ಕರಣಿ) ಈಗ ರಣಬಿಸಿಲಿನ ಮಧ್ಯೆಯೂ ಸಾರ್ವಜನಿಕರ ಹೈಲೈಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ‘ದಕ್ಷಿಣ ಭಾರತದ ಕಾಶಿ’ ಎಂದೇ ಖ್ಯಾತಿ ಪಡೆದಿರುವ ಮಹಾಕೂಟೇಶ್ವರ ದೇವಾಲಯದ ಆವರಣದಲ್ಲಿರುವ ಈ ಪುಷ್ಕರಣಿ, ತೀವ್ರ ಬರಗಾಲದ ಸಂದರ್ಭದಲ್ಲೂ ಬತ್ತದೇ ಇರುವುದು ಇಂದಿಗೂ ಒಂದು ವಿಸ್ಮಯವೇ ಸರಿ. ಸುತ್ತಮುತ್ತಲಿನ ನೈಸರ್ಗಿಕ ಗುಡ್ಡಗಳ ಸೆಲೆಯಿಂದ ನಿರಂತರವಾಗಿ ಹರಿದು ಬರುವ ಶುದ್ಧ ನೀರು ಈ ಹೊಂಡವನ್ನು ಸದಾ ಹಸಿರು ಮತ್ತು ತಂಪಾಗಿಟ್ಟಿರುತ್ತದೆ. ಉತ್ತರ ಕರ್ನಾಟಕದ ಧಗಧಗಿಸುವ ಬಿಸಿಲಿಗೆ ತತ್ತರಿಸಿರುವ ಜನತೆಗೆ ಈ ಐತಿಹಾಸಿಕ ಪುಷ್ಕರಣಿ ಸದ್ಯ ಅತ್ಯಂತ ನೆಚ್ಚಿನ ರಿಸಾರ್ಟ್‌ನಂತೆ ಭಾಸವಾಗುತ್ತಿದೆ.

ಈ ಪವಿತ್ರ ಪುಷ್ಕರಣಿಗೆ ಕೇವಲ ಪ್ರವಾಸಿ ಮಹತ್ವ ಮಾತ್ರವಲ್ಲದೆ, ಅಪಾರ ಧಾರ್ಮಿಕ ಮತ್ತು ಔಷಧೀಯ ನಂಬಿಕೆಗಳೂ ಇವೆ. ಇಲ್ಲಿನ ತಂಪಾದ ನೀರಿನಲ್ಲಿ ಮಿಂದೆದ್ದರೆ ಮೈಕೈ ನೋವು ನಿವಾರಣೆಯಾಗುವುದಲ್ಲದೆ, ಚರ್ಮ ರೋಗಗಳೂ ವಾಸಿಯಾಗುತ್ತವೆ ಎಂಬ ಗಾಢವಾದ ನಂಬಿಕೆ ಭಕ್ತರಲ್ಲಿದೆ. ಇದೇ ಕಾರಣಕ್ಕೆ ಸದ್ಯ ಸುಡುಬಿಸಿಲಿನಿಂದ ಕಂಗಾಲಾಗಿರುವ ರಾಜ್ಯ ಮತ್ತು ಹೊರರಾಜ್ಯಗಳ ಸಾವಿರಾರು ಪ್ರವಾಸಿಗರು, ತಮ್ಮ ಕುಟುಂಬ ಸಮೇತರಾಗಿ ಮಹಾಕೂಟಕ್ಕೆ ಧಾವಿಸುತ್ತಿದ್ದಾರೆ. ಮಕ್ಕಳು, ಮಹಿಳೆಯರು ಎನ್ನದೆ ಎಲ್ಲರೂ ಹೊಂಡದ ತಣ್ಣನೆಯ ನೀರಿನಲ್ಲಿ ಮುಳುಗೇಳುತ್ತಾ, ಜಲಕ್ರೀಡೆಯಾಡುತ್ತಾ ಸುದೀರ್ಘ ಸಮಯ ಕಳೆಯುವ ಮೂಲಕ ಸಮ್ಮರ್ ವೆಕೇಶನ್ ಅನ್ನು ಸಖತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ.

Tags:

error: Content is protected !!