* ಖಾನಾಪೂರ ಪಟ್ಟಣಕ್ಕೆ ಆನೆಯ ಎಂಟ್ರಿ.
* ಛತ್ರಪತಿ ಶಿವಾಜಿ ನಗರದಲ್ಲಿ ಗಜಪಡೆ ಅಬ್ಬರ.
* ವಾಯುವಿಹಾರಿಗಳ ಮೊಬೈಲ್‌ನಲ್ಲಿ ದೃಶ್ಯ ಸೆರೆ.
* ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ.

ನಿನ್ನೆಯಷ್ಟೇ ಮೊದೇಕೊಪ್ಪ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಆನೆ, ಇಂದು ನೇರವಾಗಿ ಖಾನಾಪೂರ ಪಟ್ಟಣದ ಜನವಸತಿ ಪ್ರದೇಶಕ್ಕೆ ಲಗ್ಗೆ ಇಟ್ಟಿದೆ. ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದ ನಾಗರಿಕರು ಆನೆಯನ್ನು ಕಂಡು ಬೆಚ್ಚಿಬಿದ್ದಿದ್ದು, ಪಟ್ಟಣದಾದ್ಯಂತ ಈಗ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ನಿನ್ನೆ ಮೊದೇಕೊಪ್ಪ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದ ಒಂಟಿ ಆನೆ, ಇಂದು ಮುಂಜಾನೆ ಖಾನಾಪೂರ ಪಟ್ಟಣದ ಛತ್ರಪತಿ ಶಿವಾಜಿ ನಗರ ಪ್ರದೇಶದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡಿದೆ. ಜನವಸತಿ ಪ್ರದೇಶದ ರಸ್ತೆಯಲ್ಲಿ ಆನೆ ಸಾಗುವುದನ್ನು ಕಂಡ ಸಾರ್ವಜನಿಕರು ಭಯಭೀತರಾಗಿದ್ದಾರೆ. ವಾಯುವಿಹಾರಕ್ಕೆ ಹೊರಟಿದ್ದ ನಾಗರಿಕರು ಆನೆಯ ಚಲನವಲನಗಳನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದು, ಈ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿವೆ.
ಇಷ್ಟು ದಿನ ಕಾಡಂಚಿನ ಗ್ರಾಮಗಳಿಗೆ ಸೀಮಿತವಾಗಿದ್ದ ಆನೆಗಳ ಹಾವಳಿ, ಈಗ ಪಟ್ಟಣದ ಹೃದಯಭಾಗಕ್ಕೆ ತಲುಪಿರುವುದು ಅರಣ್ಯ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಅರಣ್ಯ ಇಲಾಖೆಯ ಎಸಿಎಫ್ ಸುನೀತಾ ನಿಂಬರಗಿ ಹಾಗೂ ಆರ್.ಎಫ್.ಒ ಅವರು ಕೂಡಲೇ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಆನೆ ಸಂಚರಿಸುತ್ತಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯುವ ಮುನ್ನ ಇಲಾಖೆ ಕಾರ್ಯಾಚರಣೆ ನಡೆಸಬೇಕಿದೆ. ಅಧಿಕಾರಿಗಳು ಈ ಸಮಸ್ಯೆಗೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
