BELAGAVI

ಕೃಷಿ ಭವನದಲ್ಲಿ ಅಕ್ರಮ ಮದ್ಯದಂಗಡಿ; ತಕ್ಷಣ ತೆರವುಗೊಳಿಸಲು ಸಿದ್ಧಗೌಡ ಮೋದಗಿ ಆಗ್ರಹ

Share

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಎದುರು ಸರಕಾರದ ಸುಪರ್ದಿಗೆಯ ಕೃಷಿ ಭವನದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದ್ಯದ ಅಂಗಡಿಯನ್ನು ತಕ್ಷಣ ತೆರವುಗೊಳಿಸಿ, ಆ ಕಟ್ಟಡವನ್ನು ಸಂಪೂರ್ಣವಾಗಿ ಸರಕಾರದ ವಶಕ್ಕೆ ಪಡೆದುಕೊಳ್ಳಬೇಕು ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ಧಗೌಡ ಮೋದಗಿ ತೀವ್ರ ಆಗ್ರಹ ವ್ಯಕ್ತಪಡಿಸಿದ್ದಾರೆ.

ಸೋಮವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೃಷಿಕರ ಸೇವೆ ಮತ್ತು ಕೃಷಿ ಚಟುವಟಿಕೆಗಳಿಗೆ ಮೀಸಲಾಗಿದ್ದ ಕೃಷಿ ಭವನವು ತನ್ನ ಮೂಲ ಉದ್ದೇಶವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು, ಕಳೆದ ಸುಮಾರು 60 ವರ್ಷಗಳಿಂದ ವಿವಿಧ ವಾಣಿಜ್ಯ ಮಳಿಗೆಗಳಾಗಿ ಬಳಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿಕರಿಗೆ ಮಾರ್ಗದರ್ಶನ, ತರಬೇತಿ ಹಾಗೂ ಕೃಷಿ ಸಂಬಂಧಿತ ಕಾರ್ಯಕ್ರಮಗಳು ನಡೆಯಬೇಕಿದ್ದ ಈ ಕಟ್ಟಡದಲ್ಲಿ ಮದ್ಯದ ಅಂಗಡಿ ಕಾರ್ಯನಿರ್ವಹಿಸುತ್ತಿರುವುದು ಅತ್ಯಂತ ಖಂಡನೀಯ ಸಂಗತಿಯಾಗಿದೆ. ಇದು ಕೃಷಿ ಕ್ಷೇತ್ರದ ಗೌರವಕ್ಕೆ ಧಕ್ಕೆಯಾದಂತೆಯೇ, ಸಾರ್ವಜನಿಕ ನೈತಿಕತೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ಸರಕಾರದ ಆಸ್ತಿ ಆಗಿರುವ ಈ ಭವನವನ್ನು ತಕ್ಷಣ ವಶಕ್ಕೆ ಪಡೆದು, ಅದರ ಮೂಲ ಉದ್ದೇಶಕ್ಕೆ ಅನುಗುಣವಾಗಿ ಕೃಷಿ ಚಟುವಟಿಕೆಗಳಿಗೆ ಬಳಸುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಭಾರತೀಯ ಕೃಷಿಕ ಸಮಾಜದಿಂದ ಕಾನೂನು ಹೋರಾಟ ಆರಂಭಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಶೀವಲೀಲಾ ಮೀಸಾಳೆ, ಸಂಜೀವ ಡೊಂಗರಗಾವಿ, ಶೇಖರ ಗುರನ್ನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!