• ಡಿಸಿಎಂ ಭೇಟಿಯಲ್ಲಿ ರಾಜಕೀಯ ವಿಶೇಷತೆ ಇಲ್ಲ
• ಅಲ್ಪಸಂಖ್ಯಾತ ಮುಖಂಡರ ಉಚ್ಚಾಟನೆಗೆ ಸತೀಶ್ ಅಸಮಾಧಾನ
• ಲೋಪದೋಷ ಸರಿಪಡಿಸುವ ಭರವಸೆ ನೀಡಿದ ಡಿಕೆಶಿ
• ಹ್ಯಾರಿಸ್ ಮನೆ ಮೇಲೆ ಇಡಿ ದಾಳಿ: ಮಾಹಿತಿ ಇಲ್ಲ ಎಂದ ಸಚಿವರು

ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಭೇಟಿಯ ಕುರಿತು ಹಬ್ಬಿದ್ದ ರಾಜಕೀಯ ಊಹಾಪೋಹಗಳಿಗೆ ತೆರೆ ಎಳೆದಿರುವ ಸಚಿವರು, ಇದು ಕೇವಲ ಸೌಜನ್ಯದ ಭೇಟಿಯಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿ ಡಿ.ಸಿ.ಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ನಡೆಸಿದ ಭೇಟಿಯ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಭೇಟಿಯಲ್ಲಿ ಯಾವುದೇ ರಾಜಕೀಯ ಗುಟ್ಟುಗಳಿಲ್ಲ, ಸರ್ಕಾರಿ ಕೆಲಸ ಹಾಗೂ ಪಕ್ಷದ ಸಂಘಟನೆಯ ಬಗ್ಗೆ ಚರ್ಚಿಸಲು ಭೇಟಿಯಾಗುವುದು ಸಹಜ ಪ್ರಕ್ರಿಯೆ ಎಂದು ಅವರು ತಿಳಿಸಿದರು. ಆದರೆ, ಚುನಾವಣಾ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮುಖಂಡರನ್ನು ಪಕ್ಷದಿಂದ ದೂರವಿಟ್ಟಿರುವ ವಿಚಾರವಾಗಿ ತಾವು ಕೆಪಿಸಿಸಿ ಅಧ್ಯಕ್ಷರೊಂದಿಗೆ ಗಂಭೀರವಾಗಿ ಚರ್ಚಿಸಿರುವುದಾಗಿ ಅವರು ಬಹಿರಂಗಪಡಿಸಿದರು. ಬೈಟ್
ಪಕ್ಷದ ಬಲವರ್ಧನೆಯಲ್ಲಿ ಅಲ್ಪಸಂಖ್ಯಾತರು ಪ್ರಮುಖ ಪಾತ್ರ ವಹಿಸುತ್ತಾರೆ. ಅಂತಹ ಮುಖಂಡರನ್ನು ಹೊರಹಾಕಿದ್ದು ಸರಿಯಲ್ಲ ಎಂಬ ತಮ್ಮ ನಿಲುವನ್ನು ಡಿ.ಕೆ. ಶಿವಕುಮಾರ್ ಅವರ ಮುಂದೆ ವ್ಯಕ್ತಪಡಿಸಿದ್ದಾಗಿ ಸಚಿವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್ ಅವರು, ನಡೆದಿರುವ ಲೋಪದೋಷಗಳನ್ನು ಗಮನಿಸಿದ್ದು, ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಇನ್ನು ಶಾಸಕ ಎನ್.ಎ. ಹ್ಯಾರಿಸ್ ಅವರ ಮನೆ ಮೇಲೆ ನಡೆದಿರುವ ಇಡಿ ದಾಳಿಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಬಗ್ಗೆ ತಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇಂತಹ ದಾಳಿಗಳು ನಡೆದಾಗ ಕಾನೂನುಬದ್ಧವಾಗಿಯೇ ಹೋರಾಟ ನಡೆಸಬೇಕಾಗುತ್ತದೆ” ಎಂದು ಪ್ರತಿಕ್ರಿಯಿಸಿದರು.
