• ಬಾಕಿ ಭತ್ಯೆ ನೀಡಲು ಪಿಂಚಣಿದಾರರ ಪಟ್ಟು
• ಏಪ್ರಿಲ್ 16 ರಂದು ದೇಶವ್ಯಾಪಿ ಪ್ರತಿಭಟನೆ
• ದೂರಸಂಪರ್ಕ ಇಲಾಖೆ ವಿಳಂಬಕ್ಕೆ ತೀವ್ರ ಆಕ್ರೋಶ
• ನಾಲ್ಕು ಲಕ್ಷ ಹಿರಿಯ ನಾಗರಿಕರಿಂದ ಹೋರಾಟ

ಕೇಂದ್ರ ಸರ್ಕಾರದ ಅಧೀನದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ನ ಲಕ್ಷಾಂತರ ಪಿಂಚಣಿದಾರರು ಈಗ ಬೀದಿಗಿಳಿಯುವ ಮುನ್ಸೂಚನೆ ನೀಡಿದ್ದಾರೆ. ತಮಗೆ ಬರಬೇಕಾದ ತುಟ್ಟಿಭತ್ಯೆಯ ಹಕ್ಕಿಗಾಗಿ ದೆಹಲಿಯ ಮಟ್ಟದಲ್ಲಿ ಪತ್ರ ಸಮರ ಆರಂಭವಾಗಿದ್ದು, ಸರ್ಕಾರಕ್ಕೆ ಗಡುವು ನೀಡಲಾಗಿದೆ
ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ನ ಸುಮಾರು 4 ಲಕ್ಷ ಪಿಂಚಣಿದಾರರಿಗೆ ಬರಬೇಕಾದ ಜನವರಿ 2026ರ ತುಟ್ಟಿಭತ್ಯೆ (IDA/DR) ವಿಳಂಬವಾಗುತ್ತಿರುವುದನ್ನು ಖಂಡಿಸಿ ಪಿಂಚಣಿದಾರರ ಸಂಘಟನೆಗಳ ಒಕ್ಕೂಟವು ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಫೆಬ್ರವರಿ 27 ರಂದೇ ಸಾರ್ವಜನಿಕ ಉದ್ಯಮಗಳ ಇಲಾಖೆ (DPE) ಆದೇಶ ಹೊರಡಿಸಿದ್ದರೂ, ದೂರಸಂಪರ್ಕ ಇಲಾಖೆಯು (DoT) ಇದನ್ನು ಜಾರಿಗೆ ತರಲು ಮೀನಮೇಷ ಎಣಿಸುತ್ತಿದೆ. ಇದರಿಂದಾಗಿ ಹಿರಿಯ ನಾಗರಿಕರಲ್ಲಿ ತೀವ್ರ ಆತಂಕ ಮತ್ತು ಅಸಮಾಧಾನ ಮೂಡಿದ್ದು, ಇಲಾಖೆಯ ವಿಳಂಬ ಧೋರಣೆಯ ವಿರುದ್ಧ ಅಸಮಾಧಾನ ಸ್ಫೋಟಗೊಂಡಿದೆ.ಕಳೆದ ಮಾರ್ಚ್ ತಿಂಗಳಲ್ಲೇ ಅಗತ್ಯ ಮಾಹಿತಿಯನ್ನು ಬಿಎಸ್ಎನ್ಎಲ್ ಕಚೇರಿ ನೀಡಿದ್ದರೂ, ದೂರಸಂಪರ್ಕ ಇಲಾಖೆ ಮೌನಕ್ಕೆ ಶರಣಾಗಿರುವುದು ಪ್ರತಿಭಟನೆಗೆ ನಾಂದಿ ಹಾಡಿದೆ. ಈ ಹಿನ್ನೆಲೆಯಲ್ಲಿ, ತಕ್ಷಣವೇ ಆದೇಶ ಜಾರಿಗೊಳಿಸದಿದ್ದರೆ ಏಪ್ರಿಲ್ 16 ರಂದು ದೇಶವ್ಯಾಪಿ ಬಿಎಸ್ಎನ್ಎಲ್ ಕಚೇರಿಗಳ ಮುಂದೆ ಪ್ರದರ್ಶನ ಹಾಗೂ ಏಪ್ರಿಲ್ 30 ರಂದು ಬೃಹತ್ ಧರಣಿ ನಡೆಸುವುದಾಗಿ ಒಕ್ಕೂಟವು ಎಚ್ಚರಿಸಿದೆ. ಹಿರಿಯ ನಾಗರಿಕರ ಶಾಪಕ್ಕೆ ತುತ್ತಾಗುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಸಂಘಟನೆಯು ಪತ್ರದ ಮೂಲಕ ಆಗ್ರಹಿಸಿದೆ.
ನೌಕರರ ಸಂಘದ ಪ್ರಮುಖರಾದ ಅಂಗಡಿ ಅವರು ಕೇಂದ್ರ ಸರ್ಕಾರದಿಂದ ಮೊದಲೂ ತುಟ್ಟಿ ಭತ್ಯೆ ಜಾರಿಯಾಗುತ್ತಲೇ ಪಾವತಿಯಾಗುತ್ತಿತ್ತು. ಆದರೇ ಈಗ ಅದು ಜಾರಿಯಾಗುತ್ತಿಲ್ಲ. ಅಲ್ಲದೇ ಪಿಂಚಣಿಯನ್ನು ಕೂಡ ಕಳೆದ ಹಲವಾರು ವರ್ಷಗಳಿಂದ ಪರಿಷ್ಕರಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದಿಂದ ಜಾರಿಯಾದ ತುಟ್ಟಿಭತ್ಯೆಯನ್ನು ಪಿಂಚಣಿಯಲ್ಲಿ ಜಾರಿ ಮಾಡುತ್ತಿಲ್ಲ. ಕೇಂದ್ರದ ಈ ನೀತಿಯನ್ನು ಖಂಡಿಸಿ ಸುಮಾರು 12 ಸಂಘಗಳು ಪ್ರತಿಭಟನೆಯನ್ನು ನಡೆಸುತ್ತಿವೆ. ಇಷ್ಟರೊಳಗೆ ಆಗಲಿಲ್ಲವೆಂದರೇ ಏಪ್ರೀಲ್ 30 ರಂದು ಮತ್ತೇ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು, ತುಟ್ಟಿ ಭತ್ಯೆ ನೀಡುವುದು ನೌಕರರ ಸ್ವಾರ್ಥ್ಯಕಲ್ಲ. ದರ ಏರಿಕೆಗೆ ತಕ್ಕಂತೆ ತುಟ್ಟಿ ಭತ್ಯೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಸಂಘದ ಉಪಾಧ್ಯಕ್ಷ ರಾಮು ತಟಪಟಿ ಹೇಳಿದರು.
ಈ ಸಂದರ್ಭದಲ್ಲಿ ವಿ. ವಾರಾ ಪ್ರಸಾದ್, ಪ್ರಲ್ಹಾದ್ ರೈ, ಡಿ.ಡಿ.ಮಿಸ್ತ್ರಿ, ಮುರಳೀಧರನ್ ನೈರ್, ಜಿ.ಎಲ್. ಜೋಗಿ, ಎ.ಕೆ.ಕೌಶೀಕ್ ಸೇರಿದಂತ ಇನ್ನುಳಿದವರು ಭಾಗಿಯಾಗಿದ್ಧರು.
