BELAGAVI

ಮಹೇಶ್ ಫೌಂಡೇಶನ್ನ MCXCCL ಬೆಂಬಲಿತ ಮೊಬೈಲ್ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿದ ಸಚಿವ ಸತೀಶ್ ಜಾರಕಿಹೊಳಿ

Share

ಮಹೇಶ ಫೌಂಡೇಶನ್, MCXCCL ನ CSR ಸಹಕಾರದೊಂದಿಗೆ, ಸೌರ ಶಕ್ತಿ ಆಧಾರಿತ “ಟೆಕ್ ಆನ್ ವೀಲ್ಸ್” ಮೊಬೈಲ್ ಕಂಪ್ಯೂಟರ್ ಲ್ಯಾಬ್ ಅನ್ನು ಪ್ರಾರಂಭಿಸಿದ್ದು, ಇದು ಬೆಳಗಾವಿ ಹಾಗೂ ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ, ಅಗತ್ಯವಿರುವ ಮಕ್ಕಳಿಗೆ ಮತ್ತು ಗ್ರಾಮೀಣ ಭಾಗದ ಯುವಜನರಿಗೆ ಡಿಜಿಟಲ್ ಶಿಕ್ಷಣವನ್ನು ಒದಗಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ.


ಈ ಉಪಕ್ರಮವು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ, ಸೌಲಭ್ಯ ವಂಚಿತ ಮಕ್ಕಳು ಮತ್ತು ಗ್ರಾಮೀಣ ಪ್ರದೇಶದ ಯುವಜನರಿಗೆ ಡಿಜಿಟಲ್ ಕಲಿಕೆಯ ಅವಕಾಶಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಬೆಳಗಾವಿಯ ನಗರ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ 40 ಸರ್ಕಾರಿ ಶಾಲೆಗಳ 4,800 ವಿದ್ಯಾರ್ಥಿಗಳಿಗೆ ಡಿಜಿಟಲ್ ಸಾಕ್ಷರತೆಯನ್ನು ಬಲಪಡಿಸುವ ಮತ್ತು ತಂತ್ರಜ್ಞಾನದ ಪ್ರವೇಶವನ್ನು ಒದಗಿಸುವ ಮೂಲಕ ಪ್ರಯೋಜನವನ್ನು ನೀಡುತ್ತದೆ. ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಗ್ರಾಮೀಣ ಪ್ರದೇಶದ, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಅನುಕೂಲವಾಗುವಂತೆ ದೊರಕಿಸುವ ಮೂಲಕ ಅಗತ್ಯವಿರುವ ಮಕ್ಕಳ ಭವಿಷ್ಯವನ್ನು ಉನ್ನತೀಕರಿಸಲು ಇದು ಸಹಾಯ ಮಾಡುತ್ತದೆ.

ಮಾನ್ಯ ಲೋಕೋಪಯೋಗಿ ಇಲಾಖೆಯ ಗೌರವಾನ್ವಿತ ಸಚಿವರು, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು MCXCCL ಅವರು CSR ಉಪಕ್ರಮದಡಿಯಲ್ಲಿ ಬೆಂಬಲಿಸಿದ ಮಹೇಶ ಫೌಂಡೇಶನ್ನ “ಟೆಕ್ ಆನ್ ವೀಲ್ಸ್” ಮೊಬೈಲ್ ಕಂಪ್ಯೂಟರ್ ಲ್ಯಾಬ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ಚಿಕ್ಕೋಡಿ ಸಂಸದರಾದ, ಪ್ರಿಯಾಂಕಾ ಜಾರಕಿಹೊಳಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇಬ್ಬರು ಗಣ್ಯರು ಮಹೇಶ ಫೌಂಡೇಶನ್ನ ಕಾರ್ಯ ಮತ್ತು ಸೃಜನಾತ್ಮಕ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ನೀಡುತ್ತಿರುವ ಸೇವೆಯನ್ನು ಮೆಚ್ಚಿದರು.
ಈ ಸಂಧರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಮಹೇಶ ಫೌಂಡೇಶನ್ ತನ್ನ ಹಲವಾರು ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದೆ. ಬೆಳಗಾವಿ ವಿಭಾಗದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗುವಂತೆ ಅವರ ಮನೆ ಬಾಗಿಲಿಗೆ ಮೊಬೈಲ್ ಕಂಪ್ಯೂಟರ್ ಲ್ಯಾಬ್ ಮೂಲಕ ಡಿಜಿಟಲ್ ಶಿಕ್ಷಣ ಒದಗಿಸುವ ಅವರ ಪ್ರಯತ್ನ ಅದ್ಭುತವಾಗಿದೆ ಈ ಕಾರ್ಯಕ್ರಮ ಯಶಸ್ವಿಯಾಗಿ ಮುಂದುವರೆಯಲಿ ಹೆಚ್ಚಿನ ಮಕ್ಕಳಿಗೆ ಸಹಾಯವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ, ಸಂಸದೆ ಪ್ರಿಯಾಂಕ ಜಾರಕಿಹೊಳಿ:
ಮಹೇಶ್ ಫೌಂಡೇಶನ್ ನ ಡಿಜಿಟಲ್ ಶಿಕ್ಷಣವನ್ನು ಪ್ರೋತ್ಸಾಹಿಸುವ ಈ ಪ್ರಯತ್ನ ಆದರ್ಶನೀಯ. ಇಂತಹ ಕಾರ್ಯಕ್ರಮಗಳು ಸೌಲಭ್ಯ ವಂಚಿತ ಮಕ್ಕಳಿಗೆ ಆಧುನಿಕ ಶಿಕ್ಷಣ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡಲು ಸಹಕಾರಿಯಾಗಿವೆ. ಈ ಸೌಲಭ್ಯದ ಸದಾವಕಾಶವನ್ನು ಮಕ್ಕಳು ಪಡೆದುಕೊಂಡು ಅವರ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಬೇಕು. ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಸ್ವಯಂಸೇವಕರು ಮತ್ತು ಮಹೇಶ್ ಫೌಂಡೇಶನ್ ಸಿಬ್ಬಂದಿ ವರ್ಗದರು ಉಪಸ್ಥಿತರಿದ್ದರು.

Tags:

error: Content is protected !!