ಯತೀಂದ್ರ ಸಿದ್ದರಾಮಯ್ಯ ಅವರು “ಸಿದ್ದರಾಮಯ್ಯ ಮುಂದುವರಿದು ಮುಖ್ಯಮಂತ್ರಿ ಆಗಿರುತ್ತಾರೆ” ಎಂದು ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿ, ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಯತ್ನಾಳ, ನಾನು ಅಧಿವೇಶನ ಮುಗಿಸಿ ಬರುವಾಗ ಕೆಲ ಕಾಂಗ್ರೆಸ್ ಮುಖಂಡರು ಸಿಕ್ಕಿದ್ದರು. ಅವರು ‘ನಾಳೆಯಿಂದ ನಮ್ಮ ಯುದ್ಧ ಪ್ರಾರಂಭ’ ಎಂದು ಹೇಳಿದರು. ಇದು ಏನಾಗುತ್ತದೆ ಎಂಬುದು ಕಾದು ನೋಡಬೇಕು” ಎಂದರು. ಕಾಂಗ್ರೆಸ್ ಒಳಜಗಳದಿಂದ ರಾಜ್ಯದ ಅಭಿವೃದ್ಧಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಯಾವುದೇ ಇಲಾಖೆಯಲ್ಲಿ ನೇಮಕಾತಿಗಳು ಆಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿಯೇ ಕಾಣಿಸುತ್ತಿಲ್ಲ” ಎಂದು ಆಕ್ಷೇಪಿಸಿದರು.
“ಸಿದ್ದರಾಮಯ್ಯ ಇನ್ನೆಷ್ಟು ದಿನ ಮುಖ್ಯಮಂತ್ರಿ ಇರುತ್ತಾರೋ ಗೊತ್ತಿಲ್ಲ. ಇರುವಷ್ಟು ದಿನವಾದರೂ ಅಭಿವೃದ್ಧಿ ಕೆಲಸ ಮಾಡಲಿ ಎಂದು ಸಿಎಂಗೆ ಹೇಳಿದ್ದೇನೆ” ಎಂದರು.

ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಕಾದಾಟದಿಂದಲೇ ರಾಜ್ಯದ ಅಭಿವೃದ್ಧಿ ಅಸ್ತವ್ಯಸ್ತವಾಗಿದೆ. ಒಂದೆಡೆ ಅಧಿವೇಶನದಲ್ಲಿ ಧರಣಿ ನಡೆಯುತ್ತಿದ್ದರೆ, ವಿರೋಧ ಪಕ್ಷದ ಕೆಲವರು ಹಲ್ಲು ಕಿಸಿಯುತ್ತಾ ನಿಂತಿದ್ದಾರೆ ಎಂದು ಟೀಕಿಸಿದರು.
ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರದಲ್ಲಿ 5 ಸಾವಿರ ಕೋಟಿ ರೂಪಾಯಿ ಲೆಕ್ಕಕ್ಕೆ ಸಿಕ್ಕಿಲ್ಲ ಎಂದ ಯತ್ನಾಳ, ಆದರೆ ತಿಮ್ಮಾಪುರ ವಿಚಾರ ಬಂದಾಗ ಮಾತ್ರ ಹೋರಾಟ ಮಾಡಿದರು. ಡಿಕೆಶಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರ ಬಂದರೆ ಹೋರಾಟವೇ ಇಲ್ಲ. ಇವರೊಳಗೆ ಏನೋ ಒಳಒಪ್ಪಂದ ಇರಬಹುದು, ಯಾರಿಗೆ ಗೊತ್ತು? ಎಂದು ಪ್ರಶ್ನಿಸಿದರು. ಇವರು ಬಡವರ, ದಲಿತರ ಹಣ ತಿನ್ನುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಿದರು. ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ ಅವರು, ಒಳ್ಳೆಯ ಕೆಲಸ ಮಾಡುವುದಿದ್ದರೆ ಮಾಡಿ, ಇಲ್ಲದಿದ್ದರೆ ವಿಸರ್ಜನೆ ಮಾಡಲಿ” ಎಂದು ಹೇಳಿದರು.
ಡಿಕೆಶಿಯೊಂದಿಗೆ ಬಿಜೆಪಿ ಸರ್ಕಾರ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ, ಡಿಕೆ ಶಿವಕುಮಾರ್ ಜೊತೆಗೆ ಸೇರಿ ಬಿಜೆಪಿ ಸರ್ಕಾರ ರಚಿಸಿದರೆ ಅದು ಆತ್ಮಹತ್ಯೆ ಮಾಡಿಕೊಂಡಂತೆ. ರಾತ್ರಿ ಕಂಡ ಭಾವಿಗೆ ಹಗಲು ಬಿದ್ದಂತಾಗುತ್ತದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
