ವಿಜಯಪುರ ನಗರದ ಹೃದಯಭಾಗದಲ್ಲಿ ಮೀನುಗಾರಿಕೆ ಇಲಾಖೆಯಿಂದ ನಿರ್ವಹಿಸಲ್ಪಡುವ ಮುದ್ದು ಮೀನು ಸಂಗ್ರಹಾಲಯ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಈ ಮುದ್ದು ಮೀನು ಸಂಗ್ರಹಾಲಯಕ್ಕೀಗ ಆಧುನಿಕತೆಯ ಸ್ಪರ್ಷನೀಡಲಾಗಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…
ಹೌದು ವಿಜಯಪುರ ನಗರದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಬಳಿ ಮತ್ತು ಕನಕದಾಸ ವೃತ್ತದ ಹತ್ತಿರದಲ್ಲೇ ಮೀನುಗಾರಿಕೆ ಇಲಾಖೆಯಿಂದ ನಿರ್ವಹಿಸಲ್ಪಡುವ ಮುದ್ದು ಮೀನು ಸಂಗ್ರಹಾಲಯವಿದೆ. ಇದೀಗ ಈ ಶಿಥಿಲಗೊಂಡಿದ್ದ ಮುದ್ದು ಮೀನು ಸಂಗ್ರಹಾಲಯಕ್ಕೆ ಹೈಟೆಕ್ ಸ್ಪರ್ಷ ನೀಡಲಾಗಿದ್ದು, ನೋಡುಗರನ್ನ ಕೈಬೀಸಿ ಕರೆಯುತ್ತಿದೆ. ಜಿಲ್ಲಾ ಪಂಚಾಯತಿ ಹಾಗೂ ಮೀನುಗಾರಿಕೆ ಇಲಾಖೆ ಅನುದಾನದಲ್ಲಿ ಅಂದಾಜು 25 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನವೀನ ಸ್ಪರ್ಷ ನೀಡಲಾಗಿದೆ. ಕಟ್ಟಡದ ಒಳಭಾಗದಲ್ಲಿ ಬಣ್ಣಬಣ್ಣದ ತರಹೇವಾರಿ ಮುದ್ದು ಮೀನುಗಳನ್ನ ಸಂಗ್ರಹಿಸಿರುವ ಅಕ್ವೇರಿಯಂʼಗಳಿಗೆ ಅಂದರೆ ಗಾಜಿನ ಪೆಟ್ಟಿಗೆಗಳಿಗೆ ಹೊಂದಿಕೊಂಡಂತೆ ಆಧುನಿಕ ವಿನ್ಯಾಸದ ಸ್ಪರ್ಷ ನೀಡಲಾಗಿದ್ದು, ಬೃಹತ್ ಆಕಾರದ ಎಲ್‌ಈಡಿ ಪರದೆಯಲ್ಲಿ ಮೀನು ಸಂಚರಿಸುವಂತೆ ಕಂಡು ಬರುವ ದೃಶ್ಯ ಎಂಥವರನ್ನೂ ಮೋಡಿಗೊಳಿಸುತ್ತದೆ. ಇಲ್ಲಿನ ಬಣ್ಣಬಣ್ಣದ ಮೀನುಗಳು ನೋಡುಗರ ಮನಸ್ಸನ್ನು ಉಲ್ಲಾಸಗೊಳಿಸುತ್ತವೆ. ಈ ಸಂಗ್ರಹಾಲಯದಲ್ಲಿ ಮೇಲ್ಬಾಗ ಹಾಗೂ ಕೆಳಭಾಗದಲ್ಲಿ ಒಟ್ಟು 36 ಗಾಜಿನ ಪೆಟ್ಟಿಗೆ ಅಕ್ವೇರಿಯಂಗಳನ್ನ ಅಳವಡಿಸಿ ಅದರಲ್ಲಿ ವಿವಿಧ ಜಾತಿಯ ವಿವಿಧ ಆಕಾರದ ಬಣ್ಣದ ಮೀನುಗಳನ್ನು ಸಂಗ್ರಹಿಸಿಡಲಾಗಿದ್ದು, ಇವುಗಳಿಗೆ ಆಹಾರ ಮತ್ತು ಆಕ್ಸಿಜನ್‌ವ್ಯವಸ್ಥೆ ಮಾಡುವ ಮೂಲಕ ಪಾಲನೆ ಪೋಷಣೆ ಸಹ ಮಾಡಲಾಗುತ್ತಿದೆ…
ಈ ಮೀನು ಸಂಗ್ರಹಾಲಯದಲ್ಲಿ ಅಪರೂಪ ಎನ್ನುವಂತಹ ದೇಶ ವಿದೇಶಗಳ ವಿವಿಧ ತಳಿಯ ಮೀನುಗಳನ್ನ ಸಂಗ್ರಹಿಸಿಡಲಾಗಿದೆ. ಗೋಲ್ಡ್‌ಫಿಶ್, ಯೆಲ್ಲೋ ಪ್ಯಾರೇಟ್‌ಫಿಶ್, ಅರೋವಣ ಫಿಶ್, ಬ್ಲೂ ಜಾಗ್ವಾರ್‌ಫಿಶ್, ಬ್ಲಾಕ್ ಓರಾಂಡ್ ಗೋಲ್ಡ್ ಫಿಶ್, ರೇನ್‌ಬೋ, ಶಾರ್ಕ್‌ಫಿಶ್, ಗ್ರಿನ್‌ವಿಡೋ, ರೆಡ್‌ವಿಡೋ, ಜಿಬ್ರಾ ಫಿಶ್, ಅಲಿಬೋನ್ ಆಸ್ಕರ್‌ಫಿಶ್, ಮಾರ್ಬಲ್‌ಏಂಜಲ್‌ಫಿಶ್ ಮಾತ್ರವಲ್ಲದೇ ಚೈನಾದ ಅತೀ ಅಪರೂಪದ ಫವರ್ ಹಾರ್ನ್ ಫಿಶ್ ಹಾಗೂ ಮಲೇಶಿಯಾದ ಅರೋವಣ ಫಿಶ್ ಗಮನ ಸೆಳೆಯುತ್ತವೆ. ಇವುಗಳನ್ನ ಪ್ರತ್ಯೇಕ ಅಕ್ವೇರಿಯಂಗಳಲ್ಲಿ ಸಂಗ್ರಹಿಸಿಡಲಾಗಿದೆ. ಅಲ್ಲದೇ ಎಲ್ಲಾ ಅಕ್ವೇರಿಯಂಗಳ ಮೇಲೆ ಆಯಾ ತಳಿಯ ಮೀನಿನ ಹೆಸರು ಅದರೊಂದಿಗೆ ಡಿಜಿಟಲ್ ಸ್ಕ್ಯಾನರ್ ಪ್ರತಿ ಸಹ ಅಳವಡಿಸಲಾಗಿದೆ. ಇದನ್ನ ಸ್ಕ್ಯಾನ್ ಮಾಡಿದರೆ ಆ ಮೀನಿನ ಕುರಿತು ಸಂಪೂರ್ಣ ಮಾಹಿತಿ ಮೊಬೈಲಿನಲ್ಲಿ ಲಭ್ಯವಾಗುವಂತೆ ಆಧುನಿಕತೆಯ ಟಚ್‌ನೀಡಲಾಗಿದೆ. ಆದರೆ ಪ್ರಚಾರದ ಕೊರತೆಯಿಂದಾಗಿ ಇತ್ತ ಪ್ರವಾಸಿಗರು ಆಗಮಿಸುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಪ್ರತಿದಿನ ವೀಕ್ಷಣೆಗೆ ಆಗಮಿಸುತ್ತಾರೆ…
ಹೈಟೆಕ್ ಆಗಿ ಮರು ವಿನ್ಯಾಸಗೊಳಿಸಲಾದ ಮತ್ತು ಮರುನಿರ್ಮಾಣಗೊಂಡಿರುವ ಈ ಮುದ್ದು ಮೀನು ಸಂಗ್ರಹಾಲಯ ಅತೀ ಕಡಿಮೆ ದರದಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಸಲಾಗಿದೆ. ಮಕ್ಕಳಿಗೆ ಐದು ರೂಪಾಯಿ ಮತ್ತು ಹಿರಿಯರಿಗೆ ಹತ್ತು ರೂಪಾಯಿ ಟಿಕೇಟ್ ನಿಗದಿ ಮಾಡಲಾಗಿದ್ದು ಶಾಲಾ ಕಾಲೇಜಿನವರು ತಮ್ಮ ವಿದ್ಯಾರ್ಥಿಗಳಿಗೆ ಈ ಸ್ಥಳಕ್ಕೆ ಕರೆ ತಂದು ಮೀನು ವೀಕ್ಷಣೆಗೆ ಅವಕಾಶ ಕಲ್ಪಸಬೇಕು ಜೊತೆಗೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಸಹಿತ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬುದು ನಮ್ಮ ಆಶಯ…
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.