ಆ ಇಬ್ಬರು ನಾಯಕರು ಪಕ್ಷವನ್ನು ಕಟ್ಟಿ ಬೆಳೆಸಿದವರು. ಅದೇ ಪಕ್ಷದಲ್ಲಿ ಶಾಸಕರಾಗಿ ಸಚಿವರಾದವರು. ಕುಚುಕು ಕುಚುಕು ಕುಚುಕು ನೀನು ಚಡ್ಡಿ ದೋಸ್ತಿ ಕಣೋ ಕುಚುಕು, ಜೀವಕಿನ್ನ ಜಾಸ್ತಿ ಕಣೋ ಕುಚುಕು.. ಓ ಗೆಳೆಯಾ! ಜೀವದ್ಗೆಳೆಯಾ! ಎಂಬ ಹಾಡಿನಂತೆ ಇದ್ದವರು. ಅದು ಯಾರು ವಿಷ ಇಟ್ಟರೋ ಅಂದಿನಿಂದ ಇಂದಿನವರೆಗೂ ಆ ಇಬ್ಬರು ನಾನೊಂದು ತೀರ ನೀನೊಂದು ತೀರ ನಾನೊಂದು ತೀರ ನೀನೊಂದು ತೀರ ಮನಸು ಮನಸು ದೂರಾ ಎಂಬಂತೆ ದೂರವಾಗಿ ಬಿಟ್ಟರು. ಆದ್ರೆ ಇದೀಗ ಹಿಂದೂ ವಿರೋಧಿ ವಕ್ಪ್ ಕಾಯ್ದೆ ವಿರೋಧದ ಧರಣಿಯಲ್ಲಿ ಇಬ್ಬರು ಹೆಜ್ಜೆ ಹಾಕಿದಲ್ಲದೇ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಈ ಬೆಳವಣಿಗೆಯ ಕುರಿತು ಇಲ್ಲಿದೆ ಡಿಟೇಲ್ಸ್…
ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಕಟ್ಟಲು ಇಂದಿನ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಜ್ಜನ ಸರಳ ರಾಜಕಾರಣಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಇವರು ಶ್ರಮಿಸಿದ್ದು ಅಪಾರ. ಪಕ್ಷಕ್ಕೆ ನೆಲೆ ಇಲ್ಲದ್ದಾಗ ಈ ನಾಯಕರುಗಳು ಜಿಲ್ಲೆಯಲ್ಲಿ ಹಿಂದುತ್ವದ ಕಿಚ್ಚು ಹಚ್ಚಿಸಿ ಯುವಕ ಪಡೆಯನ್ನು ಹುಟ್ಟು ಹಾಕಿ ಪಕ್ಷಕ್ಕೆ ಬಲ ತಂದುಕೊಟ್ಟವರು. ಈ ನಾಯಕರುಗಳು ಅಂದು ಆಪ್ತಮಿತ್ರರಂತೆ ಇದ್ದವರು. ಬಳಿಕ ಅದ್ಯಾರೋ ವಿಷ ಕಕ್ಕಿದ ಪರಿಣಾಮ ಸಂಗ್ಯಾ ಬಾಳ್ಯಾ ನ ಹಾಗೆ ಇದ್ದವರು ಏಕಾಏಕಿ ಹಾವು ಮುಂಗುಸಿಯಂತೆ ಬದಲಾಗಿ ಹೋದರು.
ಕನಿಷ್ಠ 25 ವರ್ಷಗಳ ಕಾಲ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದಂತ ಪರಿಸ್ಥಿತಿ ನಿರ್ಮಿಸಿಕೊಂಡರು. ಇಬ್ಬರು ಒಂದೇ ಪಕ್ಷದಲ್ಲಿದ್ದರೂ ಒಬ್ಬರ ಮುಖ ಒಬ್ಬರು ನೋಡದ ಹಾಗೆ ಆಗಿ ಪಕ್ಷಕ್ಕೆ ಹಾನಿ ಆಗಿದ್ದು ಮಾತ್ರ ನಿಜ. ಇನ್ನೂ ರಾಜಕೀಯ ವೈರತ್ವ ಎಷ್ಟು ಬೆಳೆಯಿತೆಂದ್ರೆ 2013 ರ ಚುನಾವಣೆಯಲ್ಲಿ ಇಬ್ಬರು ಚುನಾವಣೆಯಲ್ಲಿ ಸ್ಪರ್ಧಿಸಿದರು. ಇಬ್ಬರ ಜಗಳದಲ್ಲಿ ಮೂರನೇಯವನಿಗೆ ಲಾಭ ಎನ್ನುವಂತೆ ಅಂದು ಕಾಂಗ್ರೆಸ್ ಪಕ್ಷದ ಜಯಗಳಿಸಿತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ನಲ್ಲಿದ್ದ ಯತ್ನಾಳ ಬಿಜೆಪಿಗೆ ಸೇರ್ಪಡೆಯಾದ ಬಳಿಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮುನಿಸಿಕೊಂಡಿದ್ದರು. ಆಗ ಬಿಜೆಪಿಯ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿ ಪಕ್ಷದಲ್ಲಿ ಮನೆ ಒಂದು ಮೂರು ಬಾಗಿಲು ಎನ್ನೋ ಪರಿಸ್ಥಿತಿ ನಿರ್ಮಾಣವಾಯಿತು.
ಆದ್ರೆ ಇದೀಗ ವಿಜಯಪುರ ನಗರದಲ್ಲಿ ನಡೆಯುತ್ತಿರುವ ವಕ್ಪ್ ವಿರುದ್ದ ಹೋರಾಟದಲ್ಲಿ ಈ ನಾಯಕರು ಅಕ್ಕಪಕ್ಕದಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ಒಂದೇ ವೇದಿಕೆ ಹಂಚಿಕೊಳ್ಳುವ ಮೂಲಕ ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದ್ದಾರೆ. ಇನ್ನೂ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ಇವರು ತಮ್ಮ ಪೆಸ್ಬುಕ್ ನಲ್ಲಿ ಯತ್ನಾಳ ಹಾಗೂ ಪಟ್ಟಣಶೆಟ್ಟಿ ನಡುವೆ ತಾವು ಕುಳಿತಿರುವ ಫೋಟೊ ಪೊಸ್ಟ್ ಮಾಡಿ
ಈ ಚಿತ್ರಕ್ಕೆ ಒಂದು ಶೀರ್ಷಿಕೆ ಕೊಡಿ!! ಒಗ್ಗಟ್ಟಿನಲ್ಲಿ ಬಲವಿದೆ..!! ಎಂದು ಕೆಂಪನೇಯ ಹಾರ್ಟ್ ಸಿಂಬಲ್ ಹಾಕಿ ‘ಅಪ್ಪು’ಗೆಯ ಪ್ರ’ಯತ್ನ’.. ಸಾಧ್ಯವಾದರೆ ಜಿಲ್ಲೆಯೇ ಕೇಸರಿಮಯ!.. ಎಂದು ಬರೆದುಕೊಂಡು ಜಿಲ್ಲೆಯ ಬಿಜೆಪಿಗೆ ಈ ಇಬ್ಬರ ನಾಯಕರ ಅಗತ್ಯದ ಕುರಿತು ಹಾಗೂ ಇಬ್ಬರೂ ಒಂದಾಗಲಿ ಎನ್ನೋ ಆಶಯವನ್ನು ಸೂಕ್ಷ್ಮವಾಗಿ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಅಧ್ಯಕ್ಷರು ಹಾಕಿದ ಪೋಸ್ಟ್ ಗೆ ಇತ್ತ ಪಟ್ಟಣಶೆಟ್ಟಿ, ಯತ್ನಾಳರ ಅಭಿಮಾನಿಗಳು ಯಾರು ವಿರೋಧ ವ್ಯಕ್ತಪಡಿಸದೇ ಎಲ್ಲರೂ ಸಹಮತಿ ಸೂಚಿಸಿದ್ದಾರೆ. ಇನ್ನೂ ಪಟ್ಟಣಶೆಟ್ಟಿ ಹಾಗೂ ಶಾಸಕ ಯತ್ನಾಳ ಒಂದೇ ವೇದಿಕೆಯಲ್ಲಿ ಇದ್ದರೂ ಒಬ್ಬರಿಗೊಬ್ಬರು ಮಾತನಾಡಿಲ್ಲಾ. ತೆರೆಮರೆಯಲ್ಲಿ ಈ ಇಬ್ಬರು ಕುಚಕು ನಾಯಕರನ್ನು ಒಂದು ಮಾಡಿಸುವ ಪ್ರಯತ್ನ ನಡೆಯುತ್ತಿದೆ ಎನ್ನೋ ಮಾತುಗಳು ಕೇಳಿಬರತೊಡಗಿವೆ. ಒಂದು ವೇಳೆ ಹಾಗೇನಾದರೂ ಆದಲ್ಲಿ ಪಕ್ಷಕ್ಕೆ ಆನೆ ಬಲ ಬಂದಂತೆಯೇ ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಒಟ್ನಲ್ಲಿ ವಿಜಯಪುರ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲರ ಒಂದು ಪೋಸ್ಟ್ ಬಿಜೆಪಿ ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದೆ.ಎ ದೋಸ್ತಿ ಹಮ್ ನಹಿ ಚೋಡೆಂಗೆ ಎಂಬ ಹಾಡಿನಂತೆ ಒಂದಾಗುವ ಮನಸ್ಸು ಮಾಡುತ್ತಾರೆಯೇ? ಅಥವಾ ಹೃದಯ ಸಮುದ್ರ ಕಲುಕಿ ಹೊತ್ತಿದೆ ದ್ವೇಷದ ಬೆಂಕಿ ಎಂಬಂತೆ ಹೀಗೆಯೇ ಮುಂದುವರೆಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ವಿಜಯಕುಮಾರ ಸಾರವಾಡ,
ಇನ್ ನ್ಯೂಜ್
ವಿಜಯಪುರ.