ರಾಜಕಾರಣ ಎಂದಮೇಲೆ ಅಧಿಕಾರ ಹೋಗುವುದು ಬರುವುದು ಸಹಜ. ಇದು ಅಂತಿಮ ಅಲ್ಲ. ಮುಂದಿನ ಅಧ್ಯಕ್ಷ ಯಾರು ಎಂಬುದು ನನಗೆ ಗೊತ್ತಿಲ್ಲ ಎಂದು ಶಾಸಕ ಲಕ್ಷ್ಮಣ್ ಸವದಿ ಹೇಳಿದ್ದಾರೆ
ಅಥಣಿ ತಾಲೂಕಿನ ಕೋಕಟನೂರ ಗ್ರಾಮದಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ್ ಸವದಿ ರಮೇಶ್ ಕತ್ತಿ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಈ ತಿಳಿಯುತ್ತು , ನಾನು ಕೂಡ ಅವತ್ತು ಊರಲ್ಲಿ ಇರಲಿಲ್ಲ. ಇದರಿಂದ ನಿನ್ನೆ ಸಂಜೆ ಎಲ್ಲ ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಎಲ್ಲಾ ನಿರ್ದೇಶಕರು ನನ್ನ ಭೇಟಿಯಾಗಿ ಹಲವು ವಿಚಾರಗಳನ್ನು ಹೇಳಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಇದರ ಬಗ್ಗೆ ಮಾಧ್ಯಮದ ಮುಂದೆ ವಿವರಿಸಿದ್ದಾರೆ. ರಾಜ್ಯದಲ್ಲಿ ಒಳ್ಳೆಯ ಬ್ಯಾಂಕ್ ರೈತರಿಗೆ ಸಾಲವನ್ನು ನೀಡಿದೆ. ಸುಸ್ಥಿತಿಯಲ್ಲಿ ಬ್ಯಾಂಕ್ ವ್ಯವಹಾರ ಇದೆ. ನಾವು ಸೂಕ್ತ ರೀತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಜಾರಕಿಹೊಳಿ ಕುಟುಂಬದಿಂದ ರಮೇಶ್ ಕತ್ತಿ ವಿರುದ್ಧ ಷಡ್ಯಂತ್ರ ಆರೋಪ ವಿಚಾರವಾಗಿ ಮಾತನಾಡಿ, ನಾನು ನಿನ್ನೆ ದೆಹಲಿಯಿಂದ ತಡವಾಗಿ ಊರಿಗೆ ಬಂದೆ. ಏನಾಗಿದೆ ಎಂಬ ಕುರಿತು ನನಗೆ ಮಾಹಿತಿ ಬೇಕಾಗಿದೆ. ನಾನು ರಮೇಶ್ ಕತ್ತಿ ಜೊತೆಗೆ ಮಾತನಾಡುತ್ತೇನೆ. ನನಗಿಂತಲೂ ಹಿರಿಯ ನಿರ್ದೇಶಕ ರಮೇಶ್ ಕತ್ತಿ, ತುಂಬಾ ದಿನಗಳಿಂದ ನಾವು ಮತ್ತು ಅವರು ಜೊತೆಗೆ ಕೆಲಸವನ್ನು ಮಾಡಿದ್ದೇವೆ ಎಂದರು.
ರಾಜಕಾರಣ ಎಂದಮೇಲೆ ಅಧಿಕಾರ ಹೋಗುವುದು ಬರುವುದು ಸಹಜ. ಇದು ಅಂತಿಮ ಅಲ್ಲ. ಮುಂದಿನ ಅಧ್ಯಕ್ಷ ಯಾರು ಎಂಬುದು ನನಗೆ ಗೊತ್ತಿಲ್ಲ. ನಾನು ಭವಿಷ್ಯ ಹೇಳುವುದಿಲ್ಲ. ಜಿಲ್ಲಾ ಮುಖಂಡರ ಜೊತೆಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಿಎಂ ಮೇಲೆ ಮುಡಾ ವಿಚಾರವಾಗಿ ಬಿಜೆಪಿಯಿಂದ ರಾಜೀನಾಮೆ ಒತ್ತಡ ವಿಚಾರವಾಗಿ ಮಾತನಾಡಿದ ಸವದಿ, ಮುಡಾ ಹಗರಣ ಎಂಬುದು ಅರ್ಥ ರಹಿತವಾಗಿರುವ ಆರೋಪ. ಕಳೆದ 20 ವರ್ಷಗಳ ಹಿಂದೆ ಸೈಟ್ ಹಂಚಿಕೆ ಮಾಡಲಾಗಿದೆ. 20 ವರ್ಷಗಳಿಂದ ಬಿಜೆಪಿ ನಾಯಕರು ಎಲ್ಲಿ ಹೋಗಿದ್ದರು? ಯಡಿಯೂರಪ್ಪನವರು ಸಿಎಂ ಸ್ಥಾನ ಅಲಂಕರಿಸಿದ್ದರು. ಸದಾನಂದಗೌಡರು ಸಿಎಂ ಆದ್ರು. ಜಗದೀಶ್ ಶೆಟ್ಟರ್ ಸಿಎಂ ಆದ್ರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ್ರು. ಬೊಮ್ಮಾಯಿ ಸಿಎಂ ಇದ್ದಾಗಲೇ ಅಲೋಕೆಟ್ ಮಾಡಲಾಗಿದೆ. ಅವಾಗ ಏಕೆ ಈ ವಿಚಾರ ಮುನ್ನೆಲೆಗೆ ಬರ್ಲಿಲ್ಲ ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಇದರಲ್ಲಿ ಎಳ್ಳಷ್ಟು ಇಲ್ಲ, ಸಿದ್ದರಾಮಯ್ಯ ಪ್ರಭಾವ ಬೀರಿದ್ದರೆ ಬಿಜೆಪಿ ನಾಯಕರು ದಾಖಲಾತಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಸಿಎಂ ಸಿದ್ದರಾಮಯ್ಯನವರ ಶ್ರೀಮತಿಗೆ ಅವರ ತವರು ಮನೆಯಿಂದ ಉಡುಗೊರೆ ರೂಪದಲ್ಲಿ ಜಾಗ ಕೊಡಲಾಗಿದೆ. ಸಿದ್ದರಾಮಯ್ಯ ಅವರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. FIR ಆದಮೇಲೆ ರಾಜೀನಾಮೆ ಕೊಡುವುದಾದರೆ ಯಾರೂ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಸಚಿವ ಸತೀಶ್ ಜಾರಕಿಹೊಳಿ, ಮಲ್ಲಿಕಾರ್ಜುನ ಖರ್ಗೆ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ರಾಜ್ಯ ಇಲಾಖೆ ಮಂತ್ರಿಗಳು. ದೆಹಲಿಗೆ ಭೇಟಿ ನೀಡಿದಾಗ ವರಿಷ್ಠರನ್ನು ಭೇಟಿ ಆಗುವುದು ಸಹಜ ಮತ್ತು ಪರಂಪರೆ. ನಾನು ಹಿಂದೆ ಮಂತ್ರಿ ಇದ್ದಾಗ ನಮ್ಮ ನಾಯಕರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿ ಬರುತ್ತಿದ್ದೆ. ನಾನು ಮೊನ್ನೆ ದೆಹಲಿಗೆ ಹೋಗಿದ್ದೆ. ಅಲ್ಲಿ ನಾನು ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದೆ. ಇಲ್ಲಿ ವರಿಷ್ಠರನ್ನು ಭೇಟಿ ಆಗುವುದು ಸಹಜ. ಊಹಾಪೋಹ ಸರಿಯಲ್ಲ ಎಂದು ಸವದಿ ಹೇಳಿದರು.