Belagavi

ಬೆಳಗಾವಿಯಲ್ಲಿ ಸಡಗರ ಸಂಭ್ರಮದ ದಸರಾಹಬ್ಬ…

Share

ಬೆಳಗಾವಿಯಲ್ಲಿ ಸಡಗರ ಸಂಭ್ರಮದಿಂದ ವಿಜಯದಶಮಿ ಆಚರಣೆಗೊಂಡಿತು. ನಗರದಲ್ಲಿ ಬನ್ನಿ ಮುರಿಯುವುದರ ಜೊತೆಗೆ ದೇವಿಯ ಸೀಮೋಲ್ಲಂಘನೆ ಅತ್ಯುತ್ಸಾಹದಿಂದ ನೆರವೇರಿತು.

ಬೆಳಗಾವಿ ನಗರದಲ್ಲಿ ಐತಿಹಾಸಿಕ ನವರಾತ್ರಿ ಉತ್ಸವ ನಡೆದು, ದಸರಾ ಮಹೋತ್ಸವ ಅತ್ಯಂತ ಉತ್ಸಾಹದಿಂದ ಏಕತೆಯಿಂದ ನಡೆಯುತ್ತದೆ. ನಗರದ ಮರಾಠಿ ವಿದ್ಯಾನಿಕೇತನ ಶಾಲೆಯ ಮೈದಾನದಲ್ಲಿ ಬೆಳಗಾವಿ ನಗರದ ಪ್ರಮುಖ ಗಲ್ಲಿಗಳ ದೇವರ ಪಲಕ್ಕಿಗಳು ಶ್ರೀ ಜ್ಯೋತಿಬಾ ದೇವರ ಸಾಸನಕಾಠಿಯನ್ನು ಮೆರವಣಿಗೆಯ ಮೂಲಕ ಹಾಡುತ್ತ ಕುಣಿಯುತ್ತ ತರಲಾಗುತ್ತದೆ. ಈ ಬಾರಿ ಪ್ರಥಮಸಲ ಐದು ಪಲ್ಲಕ್ಕಿಗಳಿಗೆ ಒಂದೇ ಬಾರಿ ಪಂಚರಿಂದ ಪೂಜೆ ನೆರವೇರಿತು. ಬೆಳಗಾವಿ ದೇವಸ್ಥಾನ ಕಮೀಟಿಯ ರಣಜೀತ್ ಚವ್ಹಾಣ ಪಾಟೀಲ್, ಭಾವು ಪಾಟೀಲ, ರಮಾಕಾಂತ್ ಕೊಂಡುಸ್ಕರ್ ಸೇರಿದಂತೆ ಇನ್ನುಳಿದ ಗಣ್ಯರು ಮಹಾಆರತಿಯನ್ನು ನೆರವೇರಿಸಿದರು.
ಈ ಉತ್ಸವದಲ್ಲಿ ನಗರ ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಭಾಗವಹಿಸಿ, ಬೆಳಗಾವಿಯಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಶಾಂತಿ ಪೂರ್ಣವಾಗಿ ನಡೆಯುವ ದಸರಾ ಉತ್ಸವವನ್ನು ಪ್ರಶಂಸಿಸಿದರು.
ನಂತರ ಬೆಳಗಾವಿಯ ರಕ್ಷಕಿಯರಾದ ಕ್ಯಾಂಪನಲ್ಲಿರುವ ಶ್ರೀ ದೇವಿಯರು ಸೀಮೋಲ್ಲಂಘನೆಗೆ ಇಳಿದರು. ಮೊದಲನೇಯದಾಗಿ ಫಿಶ್ ಮಾರ್ಕೇಟಿನಲ್ಲಿರುವ ಶ್ರೀ ಕುಂತಿಮಾತಾದೇವಿಯ ಮೆರವಣಿಗೆ ನಡೆಯಿತು. ಭಕ್ತಾಧಿಗಳು ದೇವಿಯ ಉಡಿಯನ್ನು ತುಂಬಿ ಮನಃಪೂರ್ವಕವಾಗಿ ನಗರದ ಒಳಿತಿಗಾಗಿ ಪ್ರಾರ್ಥಿಸಿದರು.

ಎರಡನೇಯದಾಗಿ ಕೆ.ಟಿ.ಪೂಜಾರಿ ಆಂಡ್ ಸನ್ಸನಿಂದ ಆರಾಧಿಸಲ್ಪಡುವ ಶ್ರೀ ಮರಿಯಮ್ಮದೇವಿ ಸೀಮೋಲ್ಲಂಘನೆಗೆ ಹೊರಟಳು. ದೇವಿಯನ್ನು ಆಕರ್ಷಕವಾಗಿ ಶೃಂಗರಿಸಿ ಮೆರವಣಿಗೆಯನ್ನು ನಡೆಸಲಾಯಿತು. ನವಜಾತ ಶಿಶುಗಳಿಂದ ಹಿಡಿದು ಎಲ್ಲರೂ ದೇವಿಯ ದರ್ಶನವನ್ನು ಪಡೆದುಕೊಂಡರು.
ಇನ್ನು ಮೂರನೇಯದಾಗಿ ಮದ್ರಾಸ್ ಸ್ಟ್ರೀಟನ ಶ್ರೀ ಮುತ್ತು ಮರಿಯಮ್ಮದೇವಿ ಸೀಮೋಲ್ಲಂಘನೆಯ ಮೂಲಕ ಭಕ್ತರನ್ನು ಹರಸಿದಳು. ದೇವಿಗೆ ಪೂಜಾಧಿಗಳನ್ನು ನೆರವೇರಿಸಿ, ಭಕ್ತರ ಸಂಕಷ್ಟಗಳನ್ನು ಪೊರೆಯಮ್ಮ ತಾಯಿ ಎಂದು ಭಕ್ತರು ಪ್ರಾರ್ಥಿಸಿದರು.
ನಾಲ್ಕನೇಯದಾಗಿ ತೆಲುಗು ಕಾಲನಿಯ ಶ್ರೀ ದುರ್ಗಾಮಾತಾ ಮತ್ತು ಮರಿಮಾತಾ ದೇವಿಯರು ಖಡ್ಗಪಾಣಿಗಳಾಗಿ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುತ್ತ, ಸೀಮೋಲ್ಲಂಘನೆ ನಡೆಸಿದರು. ಈ ವೇಳೆ ಯುವಕ-ಯುವತಿಯರು ಪಾರಂಪರೀಕ ವಾದ್ಯಗಳಿಗೆ ಹೆಜ್ಜೆಹಾಕಿದ್ದು, ವಿಶೇಷವಾಗಿತ್ತು.
ಕೊನೆಯದಾಗಿ ಆರ್.ಎಲ್. ಲೈನ್ ನ ಶ್ರೀ ತುಲಕಂತಮ್ಮಾದೇವಿ ಭಕ್ತರಿಗೆ ಅಭಯವನ್ನು ನೀಡುತ್ತ ಸೀಮೋಲ್ಲಂಘನೆ ನಡೆಸಿದಳು. ದೇವಿಯ ಆಕರ್ಷಕ ಮೆರವಣಿಗೆ ಎಲ್ಲರ ಗಮನಸೆಳೆಯಿತು. ಪ್ರತಿಯೊಬ್ಬರು ಪಾರಂಪರಿಕ ವಾದ್ಯಗಳ ತಾಳಕ್ಕೆ ಕುಣಿದಿದ್ದು ವಿಶೇಷವಾಗಿತ್ತು.

ಬೆಳಗಾವಿಯ ದಂಡುಮಂಡಳಿಯ ಮಾಜಿ ಸದಸ್ಯರಾದ ವಿಕ್ರಮ ಪುರೋಹಿತ್, ನಿರಂಜನಾ ಅಷ್ಟೇಕರ, ಸಾಜೀದ್ ಶೇಖ್, ರಿಜ್ವಾನ್ ಬೇಪಾರಿ, ಅರಬೀಯಾ ಧಾರವಾಡಕರ, ಅಲ್ಲೇದ್ದಿನ ಕಿಲ್ಲೇದಾರ, ಡಾ. ಮದನ್ ಡೋಂಗರೆ, ಡಾ.ರಾಹೀಲಾ ಶೇಖ್ ಇನ್ನುಳಿದವರು ಸತತ 16 ವರ್ಷಗಳಿಂದ ದೇವಿಯ ಮೆರವಣಿಗೆಯನ್ನು ಸ್ವಾಗತಿಸುವ ಕಾರ್ಯವನ್ನು ಮಾಡುತ್ತಾರೆ. ಈ ಬಾರಿಯೂ ದೇವಿಯ ಮೆರವಣಿಗೆಯನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಉತ್ತರ ಶಾಸಕ ಆಸೀಫ್ ಸೇಠ್, ಮಾಜಿ ಮಹಾಪೌರ ವಿಜಯ ಮೋರೆ, ಖಡೇಬಝಾರ್ ಎಸಿಪಿ ಎಚ್.ಶೇಖರಪ್ಪ, ಸೈಬರ್ ಕ್ರೈಂ ಎಸಿಪಿ ರಘು, ದಲಿತ ನಾಯಕ ಮಲ್ಲೇಶ ಚೌಗುಲೆ, ವಿಕಾಸ ಕಲಘಟಗಿ ಇನ್ನುಳಿದವರು ಭಾಗಿಯಾಗಿದ್ಧರು.
ಈ ವೇಳೆ ವಿವಿಧ ನೃತ್ಯ ಗಾಯನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆದವು.
ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಸೀಮೋಲ್ಲಂಘನೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!