ಧಾರವಾಡ ನಗರದಲ್ಲಿ ಬಡ್ಡಿ ಕಿರುಕುಳ ದಿಂದ ಬೇಸತ್ತು ವಿಷ ಕುಡಿದಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಇಂದು ಸಾವಿಗೀಡಾಗಿದ್ದಾರೆ.
ಧಾರವಾಡದ ಗೊಲ್ಲರ ಕಾಲೊನಿಯ ನಜೀರಸಾಬ್ ಅತ್ತಾರ (68) ಎಂಬ ವ್ಯಕ್ತಿಯೇ ಬಡ್ಡಿ ಕಿರುಕುಳ ದಿಂದ ಬೇಸತ್ತು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡವರು.
ನಜೀರಸಾಬ್ ಚುರುಮುರಿ ವ್ಯಾಪಾರಸ್ಥರು. ಖಾಸಗಿ ವ್ಯಕ್ತಿ ಕಡೆಯಿಂದ 1.20 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಸಾಲಕ್ಕೆ ಪ್ರತಿಯಾಗಿ ನಜೀರ್ಸಾಬ್ ಕಳೆದ ಎರಡು ವರ್ಷಗಳಿಂದ 2.50 ಲಕ್ಷ ರೂಪಾಯಿ ಬಡ್ಡಿಯನ್ನೇ ಕಟ್ಟಿದ್ದರು.
ಕಳೆದ ಎರಡು ತಿಂಗಳಿನಿಂದ ಬಡ್ಡಿ ಕಟ್ಟಿಲ್ಲ ಎಂದು ಆ ಖಾಸಗಿ ವ್ಯಕ್ತಿ ನಜೀರಸಾಬ್ ಮನೆಗೆ ಬಂದು ಧಮ್ಮಿ ಹಾಕಿದ್ದಲ್ಲದೇ ಮನೆ ಖಾಲಿ ಮಾಡಿಸುವ ಬೆದರಿಕೆ ಕೂಡ ಹಾಕಿದ್ದ.
ಇದರಿಂದ ಮನನೊಂದ ನಜೀರ್ಸಾಬ್ ಸೆ.26 ರಂದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಮನೆಯವರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದರು. ಆದರೆ, ನಜೀರಸಾಬ್ ಚಿಕಿತ್ಸೆಗೆ ಸ್ಪಂದಿಸದೇ ಇಂದು ಅಸುನೀಗಿದ್ದಾರೆ. ಬಡ್ಡಿ ಕಿರುಕುಳದಿಂದಲೇ ನಜೀರ್ ಸಾಬ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದು, ಧಾರವಾಡ ಜಿಲ್ಲಾಸ್ಪತ್ರೆ ಎದುರು ಜಮಾಯಿಸಿದ್ದರು.
ನಜೀರ್ಸಾಬ್ ಕುಟುಂಬಸ್ಥರು ಗೋಳಾಡುತ್ತಿದ್ದ ದೃಶ್ಯ ಕಂಡು ಬಂತು.
ಈ ಸಂಬಂಧ ಶಹರ ಠಾಣೆಯಲ್ಲಿ ದೂರು ದಾಖಲಿಸಿರುವ ನಜೀರ್ಸಾಬ್ ಕುಟುಂಬಸ್ಥರು, ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸುತ್ತಿದ್ದಾರೆ.