Dharwad

ಗ್ಯಾರಂಟಿ ಯೋಜನೆ ; ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿ : ಎಸ್. ಆರ್.ಪಾಟೀಲ

Share

ಧಾರವಾಡ: ಸರಕಾರ ಅನುಷ್ಠಾನ ಮಾಡಿರುವ 5 ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಸಬೇಕೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ ಅವರು ಹೇಳಿದರು.

ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಆಯೋಜಿಸಲಾದ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಸಾಂಸ್ಥಿಕ ಕಾರ್ಯ ವಿಧಾನಗಳು ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಹಳ್ಳಿಗಳಿಗೆ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸಿ ಶಾಲಾ ಮಕ್ಕಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಅಂತರ ರಾಜ್ಯ ಬಸ್‍ಗಳನ್ನು ಕಡಿಮೆ ಮಾಡಿ, ಸ್ಥಳೀಯ ಹಾಗೂ ಹಳ್ಳಿಗಳಿಗೆ ಹೆಚ್ಚುವರಿ ಬಸ್‍ಗಳ ವ್ಯವಸ್ಥೆ ಮಾಡಿ, ಸಮಸ್ಯೆಗಳು ಆಗದಂತೆ ಸರಿಯಾದ ಕ್ರಮ ಕೈಗೊಳ್ಳಲು ಸಾರಿಗೆ ಅಧಿಕಾರಿಗಳಿಗೆ ಅವರು ಖಡಕ್ಕಾಗಿ ತಿಳಿಸಿದರು.

ಕಲಘಟಗಿ ತಾಲೂಕಿನ ದೇವಿಕೊಪ್ಪ ಹಾಗೂ ನವಲಗುಂದ ತಾಲೂಕಿನಲ್ಲಿ ವಿದ್ಯುತ್ ಹಳೆಯ ಕಂಬಗಳು ಹೆಚ್ಚಾಗಿ ಬಾಗಿರುವುದು ಹಾಗೂ ವಿದ್ಯುತ್ ಸರಬರಾಜು ಸರಿಯಾಗಿ ಪೂರೈಸುವಂತೆ ಇಲಾಖೆಯ ಅಧಿಕಾರಿಗಳಿಗೆ ಪರಿಶೀಲಿಸಲು ಸೂಚನೆ ನೀಡಿದರು.

ಸರಿಯಾದ ಬೋರ್ಡ್ ವ್ಯವಸ್ಥೆ ಇಲ್ಲದಂತಹ ನ್ಯಾಯ ಬೆಲೆ ಅಂಗಡಿ ಗುರುತಿಸಿ, ತಕ್ಷಣವೇ ಬೋರ್ಡ್‍ಗಳನ್ನು ಹಾಕಿಸಬೇಕು. ಕುಂದಗೋಳ ತಾಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸುವಂತೆ ಆಹಾರ ಮತ್ತು ನಾಗರಿಕ ಸೌಲಭ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಹಳ್ಳಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ರೂ. 2,000 ಹಣವು ಸರಿಯಾಗಿ ಫಲಾನುಭವಿಗಳಿಗೆ ತಲುಪುತ್ತಿಲ್ಲವೆಂದು ದೂರುಗಳು ದಾಖಲಾಗುತ್ತಿದ್ದು, ಅಂತಹ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಮಾಡಿ, ವರದಿಯನ್ನು ನೀಡುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದರು.

ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಯಶಸ್ವಿಯಾಗಿ ಯೋಜನೆಗಳು ತಲುಪುವಂತೆ ಜಿಲ್ಲೆಯ ಹಾಗೂ ತಾಲೂಕಿನ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಮತ್ತು ಗ್ಯಾರಂಟಿ ಯೋಜನೆಯ ಸಮಿತಿ ಸದಸ್ಯರು ತಾಲೂಕು ಮಟ್ಟದಲ್ಲಿ ಸಭೆಗಳನ್ನು ಜರುಗಿಸಿ, ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಿ ಸರ್ಕಾರದ ಯೋಜನೆಗಳನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.

Tags:

error: Content is protected !!