ಗಣೇಶ ದರ್ಶನಕ್ಕೆ ಬೆಳಗಾವಿ ತಾನಾಜೀ ಗಲ್ಲಿಗೆ ಬಂದು ತನ್ನ ಕಿವಿಯೋಲೆಯನ್ನು ಕಳೆದುಕೊಂಡಿದ್ದ ಮಹಿಳೆಗೆ ಕಿವಿಯೋಲೆಗಳನ್ನು ಮರಳಿ ನೀಡುವ ಮೂಲಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳ, ತಾನಾಜೀ ಗಲ್ಲಿ ಬೆಳಗಾವಿಯ ಕಾರ್ಯಕರ್ತರೊಬ್ಬರು ಪ್ರಾಮಾಣಿಕತೆಗೆ ಸಾಕ್ಷಿಯಾಗಿದ್ದಾರೆ.
ಬೆಳಗಾವಿ ನಗರದ ತಾನಾಜೀ ಗಲ್ಲಿಯಲ್ಲಿ ಈ ಬಾರಿ ಗಣೇಶೋತ್ಸವದ ಹಿನ್ನೆಲೆ ಜನರ ಮನರಂಜನೆಗಾಗಿ ಎನಾಕೊಂಡಾ ರೂಪಕವನ್ನು ಪ್ರದರ್ಶಿಸಲಾಗುತ್ತಿದ್ದು, ಪ್ರತಿದಿನ ರಾತ್ರಿ 4 ಗಂಟೆಯ ವರೆಗೂ ಸಾವಿರಾರು ಜನರು ಗಣೇಶ ದರ್ಶಕ್ಕೆ ಆಗಮಿಸುತ್ತಿದ್ದಾರೆ. ಈ ಗದ್ದಲದಲ್ಲಿ ಕಳೆದ ರಾತ್ರಿ ಕಿತ್ತೂರಿನ ಸುಮಿತ್ರಾ ರೊಟ್ಟಿ ಎಂಬ ಮಹಿಳೆಯೂ ಹೊಸದಾಗಿ ಕೊಂಡುಕೊಂಡ ತಮ್ಮ ಚಿನ್ನದ ಕಿವಿಯೋಲೆಗಳನ್ನು ಕಳೆದುಕೊಂಡಿದ್ದರು. ಮಂಡಳದ ಓರ್ವ ಚಿಕ್ಕ ಕಾರ್ಯಕರ್ತ ಆಯುಷ ವಿನಾಯಕ ಅವರಿಗೆ ಈ ಕಿವಿಯೋಲೆಗಳು ದೊರೆತಿವೆ. ಆತಂಕಗೊಂಡ ಮಹಿಳೆ ಎಲ್ಲೆಡೆ ಪರಿಶೀಲಿಸುತ್ತಾ ತಾನಾಜೀ ಗಲ್ಲಿಯ ಮಂಟಪಕ್ಕೆ ಬಂದಾಗ ಮಂಡಳದ ಅಧ್ಯಕ್ಷರಾದ ರಾಹುಲ್ ಮುಚ್ಚಂಡಿ, ಜೀತೆಂದ್ರ ಘಸಾರಿ ಅವರು ಮತ್ತು ರಾಜು ದೇಸಾಯಿ ಅವರು ಯೋಗ್ಯ ಮಾಹಿತಿಯನ್ನು ಪಡೆದು ಕಿವಿಯೋಲೆ ಕಳೆದುಕೊಂಡ ಮಹಿಳೆಗೆ ಕಿವಿಯೋಲೆಗಳನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.