ಬೆಳಗಾವಿಯ ಗೃಹರಕ್ಷಕ ದಳದ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿ, ಧಮ್ಕಿ ಕೊಟ್ಟು, ದೌರ್ಜನ್ಯ ಮಾಡಿರುವ ಗೃಹ ರಕ್ಷಕ ದಳದ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗೃಹ ರಕ್ಷಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಭಟನೆ ನಡೆಸಿದರು.
ಹೌದು ಗೃಹ ರಕ್ಷಕದ ದಳದ ಜಿಲ್ಲಾ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೆಲಸ ಮಾಡುವಾಗ ಫಿರೋಜ್ ಮುಜಾವರ್, ಎಚ್.ಎಮ್.ನದಾಫ್ ಮತ್ತು ಆರ್.ಎ.ಮುಲ್ಲಾ ಸೇರಿದಂತೆ 25-30 ಜನರ ಗುಂಪು ಆಗಮಿಸಿ ದಬ್ಬಾಳಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ಖಂಡಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ದಬ್ಬಾಳಿಕೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗೃಹ ರಕ್ಷಕದ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಖಾನಾಪುರ ಘಟಕ ಅಧಿಕಾರಿ ಆರ್.ಎಸ್.ಗಾಳಿಮಠ ಮಾತನಾಡಿ ಕೆಲವೊಂದು ಅಹಿತಕರ ಘಟನೆಗಳು ನಮ್ಮಲ್ಲಿ ನಡೆಯುತ್ತಿವೆ. ನಾವು ಯಾರನ್ನೂ ಕೆಲಸದಿಂದ ತೆಗೆದಿಲ್ಲ. ಯಾವುದೇ ರೀತಿ ಲಿಖಿತ ರೂಪದಲ್ಲಿ ಕ್ರಮ ಆಗಿಲ್ಲ. ಖಾನಾಪುರದಲ್ಲಿಯೂ ಕೆಲ ಯುವಕರು ಧಮ್ಕಿ ಹಾಕುತ್ತಿದ್ದಾರೆ. ಇನ್ನು ಯಾರು ಅಶಿಸ್ತು ಪ್ರದರ್ಶಿಸುತ್ತಾರೆ ಅಂತವರನ್ನು ತೆಗೆದು ಹಾಕಿದ್ದೇವೆ. ಕುಡಿದ ನಶೆಯಲ್ಲಿ ಬಂದು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹುಣಶಿಕಟ್ಟಿ ಘಟಕ ಅಧಿಕಾರಿ ಬಸವರಾಜ್ ಮೆಳವಂಕಿ ಮಾತನಾಡಿ ಮೂರು ವರ್ಷಕ್ಕೊಮ್ಮೆ ಅಶಿಸ್ತು ಇದ್ದವರು, ವಾರದ ಕವಾಯತ್ತಿಗೆ ಬರದೇ ಇರುವವರನ್ನು ಕೆಲಸದಿಂದ ತೆಗೆಯಬೇಕು ಎಂಬ ನಿಯಮವಿದೆ. ಅದರ ಪ್ರಕಾರ ನಾವು ಕಮಾಂಡೆಂಟ್ ಸಾಹೇಬರಿಗೆ ಶಿಫಾರಸ್ಸು ಮಾಡಿದ್ದೇವೆ. ಆದರೆ ಇನ್ನೂ ಕೆಲಸದಿಂದ ತೆಗೆದಿಲ್ಲ. ಆದರೂ ನಮ್ಮ ಕೇಂದ್ರ ಕಚೇರಿಗೆ ಆಗಮಿಸಿದ ಕೆಲವರು ಅಧಿಕಾರಿಗಳನ್ನು ಒಳಗೆ ಹಾಕಿ ಕೀಲಿ ಹಾಕಿ ದಬ್ಬಾಳಿಕೆ ಮಾಡಿದ್ದಾರೆ. ಹೀಗಾಗಿ ಇಂತವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಥಣಿ ಘಟಕ ಅಧಿಕಾರಿ ರವಿ ಕೋಳಿ ಸೇರಿದಂತೆ ಇನ್ನು ಹಲವು ಗೃಹ ರಕ್ಷಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.