ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಿಂದ ಸವದತ್ತಿಯ ಶ್ರೀ ಯಲ್ಲಮ್ಮನಗುಡ್ಡಕ್ಕೆ ಭಕ್ತರುಅತ್ಯಂತ ಶ್ರದ್ಧಾ-ಭಕ್ತಿಯಿಂದಚಕ್ಕಡಿ, ಟ್ರ್ಯಾಕ್ಟರಗಳಲ್ಲಿ ಸೋಮವಾರ ತೆರಳಿದರು.
ಪ್ರತಿ ಐದು ವರ್ಷಕ್ಕೊಮ್ಮೆಚಕ್ಕಡಿ, ವಾಹನಗಳ ಮೂಲಕ ಯಲ್ಲಮ್ಮನಗುಡ್ಡಕ್ಕೆ ತೆರಳುವ ಸಂಪ್ರದಾಯ ಸುಳೇಭಾವಿ ಗ್ರಾಮದಲ್ಲಿ ನಡೆದುಕೊಂಡು ಬಂದಿದೆ. ಗ್ರಾಮದ ಪ್ರತಿಯೊಬ್ಬರೂ ಈ ಜಾತ್ರೆಯಲ್ಲಿ ಪಾಲ್ಗೊಂಡುದೇವಿಯದರ್ಶನ ಪಡೆದು ಪುನಿತರಾಗುತ್ತಾರೆ. ಸೋಮವಾರ ಬೆಳಿಗ್ಗೆ ಗ್ರಾಮದ ಯಲ್ಲಮ್ಮ ದೇವಿಯನ್ನು ಮೆರವಣಿಗೆ ಮೂಲಕ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ತಂದು ಉಡಿ ತುಂಬಿ ಅಲ್ಲಿಂದ ನೇರವಾಗಿ ವಾದ್ಯ ಮೇಳಗಳೊಂದಿಗೆ, ಉಧೋ ಉಧೋ ಯಲ್ಲಮ್ಮ ನಿನ್ನಾಲ್ಕ ಉಧೋ ಎಂಬ ಜಯಘೋಷದೊಂದಿಗೆ ದೇವಿಯ ನಾಮಸ್ಮರಣೆ ಮಾಡುತ್ತ ಗುಡ್ಡದತ್ತ ಭಕ್ತರು ಹೆಜ್ಜೆ ಹಾಕಿದರು. ಗ್ರಾಮದ ಸೀಮೆಯಲ್ಲಿ ಗ್ರಾಮದ ಹಿರಿಯರು, ಪಂಚರು, ದೇವಿಯ ಪೂಜಾರಿಗಳು ವಿಶೇಷ ಪೂಜೆ ಸಲ್ಲಿಸಿದರು.ಅಲ್ಲಿ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ಮುಗಿಸಿ ಗುಡ್ಡಕ್ಕೆ ತೆರಳಿದರು. ದೇವಿಯನ್ನು ಹೊತ್ತುಕೊಂಡ ಪೂಜಾರಿಗಳು ಕಾಲ್ನಡಿಗೆಯಲ್ಲಿಯೇ ಯಲ್ಲಮ್ಮನ ಗುಡ್ಡದತ್ತ ಪ್ರಯಾಣ ಬೆಳೆಸಿದರು.
ಸೋಮವಾರರಾತ್ರಿ ಸಮೀಪದ ಸೋಮನಟ್ಟಿ ಎಂಬ ಗ್ರಾಮದ ಬಳಿ ವಾಸ್ತವ್ಯ ಹೂಡಿ ಮಂಗಳವಾರ ಬೆಳಗ್ಗೆ ಅಲ್ಲಿಂದ ನೇರವಾಗಿ ಮುನವಳ್ಳಿವರೆಗೆ ಹೋಗುತ್ತಾರೆ. ಅಲ್ಲಿ ವಾಸ್ತವ್ಯ ಮಾಡಿ ಬುಧವಾರ ಫೆ.9ರಂದು ಜೋಗುಳಬಾವಿ ಸತ್ಯವ್ವನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಅದೇ ದಿನ ರಾತ್ರಿ ಯಲ್ಲಮ್ಮನ ಗುಡ್ಡಕ್ಕೆ ತೆರಳುತ್ತಾರೆ.ಮರುದಿನ ಫೆ.10ರಂದು ದೇವಿಯ ಪಡ್ಡಲಗಿ ತುಂಬುವ ಕಾರ್ಯಕ್ರಮ ನೆರವೇರಲಿದೆ ಎಂದು ಗ್ರಾಮದ ಹಿರಿಯರು ತಿಳಿಸಿದರು.
ಶ್ರೀ ಮಹಾಲಕ್ಷ್ಮೀ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಅಧ್ಯಕ್ಷರು, ಸರ್ವ ಸದಸ್ಯರು, ದೇವಿಯ ಪೂಜಾರಿಗಳು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.