Belagavi

ವಚನಾನಂದ ಸ್ವಾಮೀಜಿ, ನಿರಾಣಿ ವಿರುದ್ಧ ಮತ್ತೆ ಗುಡುಗಿದ ಯತ್ನಾಳ್..!

Share

ಯಾವನ್ನೋ ಒಬ್ಬನ್ನು ಮಂತ್ರಿ ಮಾಡಲು ಹರಜಾತ್ರೆ ಮಾಡೋದು, ಯಾವನ್ನೋ ಸಿಎಂ ಮಾಡಲು ಮತ್ತೊಂದು ಪೀಠ ಸ್ಥಾಪಿಸುವ ಉದ್ದೇಶ ಕೂಡಲಸಂಗಮ ಸ್ವಾಮೀಜಿಗಳಿಗೆ ಇಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಹರಿಹರ ಪೀಠದ ವಚನಾನಂದ ಸ್ವಾಮೀಜಿಗೆ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ನಾನು ಮಂತ್ರಿ ಸ್ಥಾನವನ್ನು ಬೇಡಿಲ್ಲ. ನಾವೆಲ್ಲಾ ಹೋರಾಟ ಮಾಡುತ್ತಿರುವುದು 2ಎ ಮೀಸಲಾತಿಗಾಗಿ. ಬೆಳಗಾವಿ ಅಧಿವೇಶನ ಸಮಯದಲ್ಲಿಯೇ ಕರ್ನಾಟಕ ಬಜೆಟ್ ಅಧಿವೇಶನಕ್ಕೂ ಮೊದಲೇ ಮೀಸಲಾತಿ ಕೊಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ತಳವಾರ ಸಮಾಜವನ್ನು ಮೊನ್ನೆ ಎಸ್‍ಟಿಗೆ ಸೇರಿಸಿದ್ದಾರೆ. ಹೀಗಾಗಿ ಬಜೆಟ್ ಅಧಿವೇಶನಕ್ಕೂ ಮೊದಲೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯನ್ನು ಸಿಎಂ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಪಂಚಮಸಾಲಿಯ ನೂರು ಪೀಠಗಳಾದರೂ ಏನೂ ಆಗೋದಿಲ್ಲ. ನೂರು, ಸಾವಿರ ಆಗಲಿ, ಒಂದು ಕುರ್ಚಿ ಇಟ್ಟುಕೊಂಡು ಬಿಟ್ಟರೆ ಮುಗಿಯಿತು. ಅದರಿಂದ ಏನೂ ಲಾಭ ಇಲ್ಲ. ಯಾರು ಸಮುದಾಯದ ಭವಿಷ್ಯಕ್ಕೋಸ್ಕರ ಹೋರಾಟ, ಚಿಂತನೆ ಮಾಡುತ್ತಾರೋ ಅವರ ಹಿಂದೆ ಜನ ಬರುತ್ತಾರೆ. ಪೀಠ ಇಟ್ಟುಕೊಂಡು ಮಜಾ ಮಾಡಿಕೊಂಡು, ಯಾವನೋ ಓರ್ವ ಫೈನಾನ್ಸಿಯರ್ 25 ಲಕ್ಷ, 1 ಕೋಟಿ ರೂಪಾಯಿ ಕೊಟ್ಟು ಕಾರ್ಯಕ್ರಮ ಮಾಡಿ ಹೋಗುವುದರಿಂದ ಪೀಠಕ್ಕೆ ಏನೂ ಗೌರವ ಬರುವುದಿಲ್ಲ. ಬಸವಜಯಮೃತ್ಯುಂಜಯ ಸ್ವಾಮೀಜಿ ಸುಮಾರು 750 ಕಿ.ಮೀ. ಪಾದಯಾತ್ರೆ ಮಾಡಿದ್ದು ಸಮುದಾಯದ ಬಡ ಮಕ್ಕಳಿಗಾಗಿ. ರಾಜ್ಯ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ತೆಗೆದುಕೊಂಡು, ಯಾರನ್ನೋ ಸಿಎಂ, ಮಂತ್ರಿ ಮಾಡಲು ಸ್ವಾಮೀಜಿ ಹೋರಾಟ ಮಾಡಿಲ್ಲ ಎಂದು ಕಿಡಿಕಾರಿದರು.

ಇನ್ನು ಯಾವನ್ನೋ ಒಬ್ಬನ್ನು ಮಂತ್ರಿ ಮಾಡಲು ಹರಜಾತ್ರೆ ಮಾಡೋದು, ಯಾವನ್ನೋ ಸಿಎಂ ಮಾಡಲು ಮತ್ತೊಂದು ಪೀಠ ಸ್ಥಾಪಿಸುವ ಉದ್ದೇಶ ಕೂಡಲಸಂಗಮ ಸ್ವಾಮೀಜಿಗಳಿಗೆ ಇಲ್ಲ. ನಮ್ಮೆಲ್ಲರದ್ದೂ 2ಎ ಮೀಸಲಾತಿಗಾಗಿ ಮಾತ್ರ ಹೋರಾಟ ನಡೆದಿದೆ. ಇದರಲ್ಲಿ ನನ್ನದು, ಕಾಶಪ್ಪನವರ, ಬೆಲ್ಲದ್, ಶಿವಶಂಕರ್ ಹಾಗೂ ಸ್ವಾಮೀಜಿಯವರ ಯಾವುದೇ ಸ್ವಾರ್ಥ ಇಲ್ಲ ಎಂದು ಯತ್ನಾಳ್ ಸಮರ್ಥಿಸಿಕೊಂಡರು.

ಇನ್ನು ಸಮಾಜ ಒಡೆದವರು ಎಲ್ಲರೂ ಹೋಗಿದ್ದಾರೆ. ಯಾರೂ ಉಳಿದಿಲ್ಲ. ಈ ಅವರಿಗೂ ಭವಿಷ್ಯ ಕಾದಿದೆ ಎಂದು ಮುರುಗೇಶ್ ನಿರಾಣಿ ಅವರಿಗೆ ಇದೇ ವೇಳೆ ಯತ್ನಾಳ್ ಟಾಂಗ್ ಕೊಟ್ಟರು.

Tags:

error: Content is protected !!