ಗಾನ ಕೋಗಿಲೆ, ಭಾರತರತ್ನ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಂತಾಪ ಸೂಚಿಸಿದ್ದಾರೆ. ಅವರ ಸಾಧನೆಗೆ ಸರಿಸಾಟಿ ಇಲ್ಲ ಸ್ಮರಿಸಿದ್ದಾರೆ. ಲತಾ ಜಿ ಅವರ ನಿಧನವು ನನ್ನು ಸೇರಿದಂತೆ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ನೋವು ತಂದಿದೆ. ಅವರ ವಿಶಾಲ ಶ್ರೇಣಿಯ ಹಾಡುಗಳಲ್ಲಿ, ಭಾರತದ ಸಾರ ಮತ್ತು ಸೌಂದರ್ಯವನ್ನು ನಿರೂಪಿಸಿದೆ. ಮುಂದಿನ ತಲೆಮಾರುಗಳು ತಮ್ಮ ಆಂತರಿಕ ಭಾವನೆಗಳ ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ಸಹಕಾರಿಯಾಗುವಂತಹ ಹಾಡುಗಳಾಗಿವೆ. ಭಾರತ ರತ್ನ, ಲತಾ ಮಂಗೇಶ್ಕರ್ ಅವರ ಸಾಧನೆಗಳು ಎಂದಿಗೂ ಅಚ್ಚಳಿಯದೇ ಉಳಿಯುತ್ತವೆ ಎಂದಿದ್ದಾರೆ.
ಅದೇ ರೀತಿ ಲತಾ ಮಂಗೇಶ್ಕರ್ ಅವರ ನಿಧನದಿಂದ ದೇಶದಲ್ಲಿ ಖಾಲಿತನ ಉಂಟಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಕಂಬನಿ ಮಿಡಿದಿದ್ದಾರೆ. ದಯೆ ಮತ್ತು ಕಾಳಜಿಯ ಪ್ರತಿರೂಪದಂತಿದ್ದ ಲತಾ ದೀದಿಯನ್ನು ಕಳೆದುಕೊಂಡ ದುಃಖವನ್ನು ನನಗೆ ಶಬ್ದಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ. ಅವರ ಅಗಲಿಕೆಯಿಂದ ಉಂಟಾದ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ. ಅವರ ಮಧುರ ಧ್ವನಿಗೆ ಜನರನ್ನು ಮಂತ್ರಮುಗ್ಧರನ್ನಾಗಿಸುವ ಅಪ್ರತಿಮ ಶಕ್ತಿಯಿತ್ತು. ಲತಾ ಮಂಗೇಶ್ಕರ್ ಅವರು ಭಾರತೀಯ ಸಂಸ್ಕೃತಿಯ ಬಲಾಢ್ಯ ಪ್ರತಿನಿಧಿಯಾಗಿದ್ದರು. ಮುಂದಿನ ಪೀಳಿಗೆಯ ನೆನಪಲ್ಲಿ ಸದಾ ಇರುತ್ತಾರೆ ಎಂದು ಹೇಳಿದ್ದಾರೆ.
ಲತಾ ಮಂಗೇಶ್ಕರ್ ಅವರ ನಿಧನದಿಂದ ಸಂಗೀತ ಕ್ಷೇತ್ರಕ್ಕೆ ಆಗಿರುವ ನಷ್ಟವನ್ನು ಭರಿಸಲಾಗದು. ಅವರ ನಿಧನ ನನಗೆ ವಯಕ್ತಿಕವಾಗಿ ದೊಡ್ಡ ನಷ್ಟ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡ ಸಂತಾಪ ಸೂಚಿಸಿದ್ದು, ಲತಾ ಮಂಗೇಶ್ಕರ್ ಅವರ ಧ್ವನಿ, ಹಾಡುಗಳನ್ನು ಮುಂದಿನ ಪೀಳಿಗೆ ನೆನಪಿಟ್ಟುಕೊಳ್ಳುತ್ತದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಇಡೀ ದೇಶಾಧ್ಯಂತ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಶೋಕದ ವಾತಾವಾರಣ ನಿರ್ಮಾಣವಾಗಿದೆ.