ಶರಣ ಸಾಹಿತ್ಯವನ್ನು ಉಳಿಸಬೇಕು, ಶರಣ ಸಾಹಿತ್ಯವನ್ನು ಜನರಿಗೆ ಪರಿಚಯಿಸಬೇಕು ಎಂದು ಹಲವಾರು ಉದ್ದೇಶಗಳನ್ನು ಇಟ್ಟುಕೊಂಡು ಯಾವುದೇ ಫಲಾಪೇಕ್ಷೆ ಇಲ್ಲದೇ ಅಶೋಕ ದೊಮ್ಮಲೂರ ಕೆಲಸ ಮಾಡುತ್ತಿದ್ದಾರೆ ಎಂದು ಗದಗ-ಡಂಬಳದ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಶ್ಲಾಘಿಸಿದರು.

ಹನ್ನೆರಡನೆಯ ಶತಮಾನದ ಬಸವಾದಿ ಶರಣರು ರಚಿಸಿದ ವಚನಗಳ ತಾಡೋಲೆಗಳ ಶುದ್ದೀಕರಣ ಮಾಡಿ ಡಿಜಿಟಲೀಕರಣ ಮಾಡುತ್ತಾ ಮುಂದಿನ ಪೀಳಿಗೆಗೂ ಅವು ತಲುಪುವ ಮಹತ್ಕಾರ್ಯ ಮಾಡುತ್ತಿರುವ ಅಶೋಕ ದೊಮ್ಮಲೂರ ಅವರಿಗೆ ಬುಧವಾರ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ ಸತ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಶೋಕ ದೊಮ್ಮಲೂರ ಅವರನ್ನು ಸತ್ಕರಿಸಿ ಗೌರವಿಸಿದರು.

ನಂತರ ಮಾತನಾಡಿದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಅಶೋಕ ದೊಮ್ಮಲೂರ ಅವರು ತಮ್ಮ ಕೈಯಿಂದ ಸ್ವಂತ ಖರ್ಚು ಮಾಡಿ ವಚನಗಳ ತಾಡೋಲೆಗಳ ಶುದ್ದೀಕರಣ ಮಾಡಿ ಡಿಜಿಟಲೀಕರಣ ಕೆಲಸ ಮಾಡುತ್ತಿದ್ದಾರೆ. ವೃತ್ತಿಯಿಂದ ಇಂಜನೀಯರ್ ಆದರೂ ಕೂಡ ಪ್ರವೃತ್ತಿಯಿಂದ ಶರಣ ಸಾಹಿತ್ಯದ ರಕ್ಷಕರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ರೀತಿ ಕಳೆದ ಶತಮಾನದಲ್ಲಿ ಫ.ಗು.ಹಳಕಟ್ಟಿ ಅವರು ಮನಸ್ಸು ಮಾಡಿದರೆ ಸುಪ್ರಿಂ ಕೋರ್ಟ ಜಡ್ಜ್ ಆಗಬಹುದಿತ್ತು. ಅಷ್ಟೊಂದು ಪ್ರತಿಭಾವಂತ ನ್ಯಾಯವಾದಿಗಳಾಗಿದ್ದರು. ಆದರೆ ಅವರು ಯಾವುದೇ ಒಂದು ವೃತ್ತಿಯನ್ನು ಅವಲಂಬಿಸಲಿಲ್ಲ. ಸಮಾಜಕ್ಕಾಗಿ ಸಂಪೂರ್ಣವಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡರು. ಅನೇಕ ಕಷ್ಟ, ನಷ್ಟವನ್ನು ಅನುಭವಿಸಿದ್ರೂ ಕೂಡ ಛಲಬಿಡದೇ ವಚನ ಸಾಹಿತ್ಯವನ್ನು ಸಂಪಾದಿಸಿ ಪ್ರಕಟಿಸುವ ಕೆಲಸ ಮಾಡಿದರು. ಯಾವುದೇ ಫಲಾಪೇಕ್ಷೆ ಇಲ್ಲದೇ ಅತ್ಯಂತ ಆಸಕ್ತಿಯಿಂದ, ಅಭಿಮಾನದಿಂದ ಅವರು ವಚನ ಸಾಹಿತ್ಯವನ್ನು ರಕ್ಷಿಸಿದ್ದರಿಂದ ವಚನಗಳನ್ನು ಓದುತ್ತಿದ್ದೇವೆ, ಚಿಂತನೆ ಮಾಡುತ್ತಿದ್ದೇವೆ, ವಚನಗಳನ್ನು ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಸ್ಮರಿಸಿಕೊಂಡರು.
ನಂತರ ಸತ್ಕಾರ ಸ್ವೀಕರಿಸಿ ಮಾತನಾಡಿದ ಅಶೋಕ ದೊಮ್ಮಲೂರ ನಾನು ರಕ್ಷಣೆ ಮಾಡಿದ ತಾಡೋಲೆಗಳ ಶುದ್ದೀಕರಣ ಮತ್ತು ಡಿಜಟಲೀಕರಣ ಮಾಡದ್ದೇನೆ. ನಾನು ಮಾತನಾಡುವುದಿಲ್ಲ. ನನ್ನ ದಾಖಲೆಗಳು ಮಾತನಾಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ನಾಗನೂರು-ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು, ಲಿಂಗಾಯತ ಮುಖಂಡರಾದ ಅಶೋಕ ಮಳಗಲಿ, ಶಂಕರ ಗುಡಸ, ಬಸವರಾಜ ರೊಟ್ಟಿ, ಸತೀಶ್ ಚೌಗಲಾ, ಎಸ್.ಜಿ.ಸಿದ್ನಾಳ, ಸುಜಾತಾ ಮತ್ತಿಕಟ್ಟಿ, ಅನ್ನಪೂರ್ಣ ಮಳಗಲಿ, ಶಿವಾ ವಾಘರವಾಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.