ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಭಾಗದ ಭಕ್ತರ ಆರಾಧ್ಯ ದೇವತೆ ಹುಕ್ಕೇರಿ ತಾಲೂಕಿನ ದಡ್ಡಿ-ಮೋಹನಗಾದ ಶ್ರೀ ಭಾವಕೇಶ್ವರಿ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯುತ್ತಿದ್ದು, ಪ್ರತಿದಿನ ಸಾವಿರಾರು ಭಕ್ತರು ಶ್ರೀದೇವಿಯ ದಿವ್ಯ ದರ್ಶನಕ್ಕೆ ಬರುತ್ತಿದ್ದಾರೆ.

ಹೌದು, ಭಾರತ ಹುಣ್ಣಿಮೆಯ ನಂತರ ಜಗನ್ಮಾತೆಯ ಜಾತ್ರಾ ಮಹೋತ್ಸವಗಳು ಆರಂಭಗೊಳ್ಳುತ್ತವೆ. ಪ್ರತಿಬಾರಿಯಂತೆ ಈ ಬಾರಿಯೂ ಹುಕ್ಕೇರಿ ತಾಲೂಕಿನ ದಡ್ಡಿ-ಮೋಹನಗಾದ ಶ್ರೀ ಭಾವಕೇಶ್ವರಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಭಕ್ತಗಣ ಸಾಗರ ಸಹಸ್ರಾರು ಸಂಖ್ಯೆಯಲ್ಲಿ ಹರಿದು ಬರುತ್ತಿದೆ.
ಕಳೆದೆರಡು ವರ್ಷಗಳಿಂದ ಕೋರೊನಾದಿಂದಾಗಿ ದೇವಾಲಯಗಳಲ್ಲಿ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆದರೇ ಈಗ ಕೋರೊನಾ ಉಪಟಳ ಕಡಿಮೆಯಾದ ಹಿನ್ನೆಲೆ ಸರ್ಕಾರ ನಿರ್ಬಂಧವನ್ನು ತೆರವುಗೊಳಿಸಿದೆ. ಜಾತ್ರಾ- ಉತ್ಸವಗಳಿಗೆ ಅನುಮತಿ ನೀಡಿದೆ. ಈ ಹಿನ್ನೆಲೆ ದಡ್ಡಿ-ಮೋಹನಗಾದ ಶ್ರೀ ಭಾವಕೇಶ್ವರಿ ಅರ್ಥಾತ್ ಮೋಹನಗಿ ಬಾಕವ್ವಾ ಜಾತ್ರಾ ಮಹೋತ್ಸವ ಸಡಗರ-ಸಂಭ್ರಮದಿಂದ ನಡೆಯುತ್ತಿದೆ.

ಯಾತ್ರೋತ್ಸವದ ನಿಮಿತ್ಯ ದೇವಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ, ಮಹಾಆರತಿ, ಉಡಿ ತುಂಬುವ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ ಇನ್ನುಳಿದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೋಹನಗಿ ಬಾಕವ್ವಾ ಕೇವಲ ಕರ್ನಾಟಕವಷ್ಟೇ ಅಲ್ಲದೇ ಮಹಾರಾಷ್ಟ್ರದ ಭಕ್ತರ ಆರಾಧ್ಯ ದೇವತೆಯಾಗಿದ್ದಾಳೆ. ಈ ಬಾರಿ ಜಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗಿಯಾಗಿ ದರ್ಶನ ಪಡೆದು, ಭವಸಾಗರವನ್ನು ಪಾರು ಮಾಡುವಂತೆ ಭಾವಕೇಶ್ವರಿಯಲ್ಲಿ ಬೇಡಿಕೊಳ್ಳಲಾಗುತ್ತಿದೆ.