ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 1998ರ ನಂತರ ನೇಮಕವಾದ ಸಿಬ್ಬಂದಿಯ ಭವಿಷ್ಯ ನಿಧಿ ಹಣವನ್ನು ಸಾರಿಗೆ ಸಂಸ್ಥೆಯ ನ್ಯಾಸ ಮಂಡಳಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿ ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ಪದಾಧಿಕಾರಿಗಳು ನವನಗರದ ಭವಿಷ್ಯನಿಧಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

13 ಸಾವಿರ ಸಿಬ್ಬಂದಿಯ ಭವಿಷ್ಯನಿಧಿ ಹಣ ಸಂದಾಯ ಮಾಡದೆ ಅನ್ಯಾಯ ಮಾಡಲಾಗಿದೆ. ಆ ಹಣ ವರ್ಗಾಯಿಸಬೇಕು ಎಂದು ಸಾಕಷ್ಟು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಈ ಕುರಿತು ಕಚೇರಿಯಲ್ಲಿ ಮಾಹಿತಿ ಕೇಳಿದರೆ ಯಾರೂ ಸರಿಯಾಗಿ ನೀಡುತ್ತಿಲ್ಲ. ವೈಯಕ್ತಿಕ ಕಾರಣಕ್ಕೆ ಹಣ ಪಡೆಯಲು ಅರ್ಜಿ ಸಲ್ಲಿಸಿದರೆ, ಅದನ್ನು ತಿರಸ್ಕರಿಸುತ್ತಾರೆ. ಅಲ್ಲದೆ, ಮರಣ ಹೊಂದಿದ ಸಿಬ್ಬಮದಿಯ ಕುಟುಂಬದವರಿಗೂ ಭವಿಷ್ಯ ನಿಧಿ ಹಣ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮರಣ ಹೊಂದಿದ ಸದಸ್ಯರ ಹಾಗೂ 58 ವರ್ಷ ಮುಗಿದ ಸಿಬ್ಬಂದಿಯ ಕುಟುಂಬ ಪಿಂಚಣಿಯನ್ನು ವಿಳಂಬವಿಲ್ಲದೆ ಪಾವತಿಸಬೇಕು ಎಂದು ಆಗ್ರಹಿಸಿದರು.
ಆರ್.ಎಫ್. ಕವಳಿಕಾಯಿ, ಶಾಂತಣ್ಣ ಮುಳವಾಡ, ಸಿ.ಎಸ್. ಬಿಡನಾರ, ಸಿ.ಎನ್. ಹಿರೇಮಠ, ಎಂ.ಎನ್. ಹೂಗಾರ, ಮಂಜುನಾಥ ನಾಯ್ಕರ, ಎಂ.ಐ. ದಳವಾಯಿ, ಪ್ರತಿಭಾ ಚರಂತಿಮಠ, ಗೋಪಾಲ ರಾಯರ, ಬಸವರಾಜ ಕಟ್ಟಿ, ಡಿ.ಎಂ. ಮರಿಸಿದ್ದನವರ, ಜಗದಿಶ ರಿತ್ತಿ, ಸಿದ್ದವ್ವ ಗದಗಿನ, ಸುಭಾಷ ಅಳವುಂಡಗಿ ಇದ್ದರು.