Belagavi

ಬೆಳಗಾವಿಯಲ್ಲಿ ಬೃಹತ್ ಕ್ಯಾನ್ಸರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರಕ್ಕೆ ಚಾಲನೆ

Share

ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಜನಸಂಖ್ಯಾವಾರು ಸುಮಾರು 44 ಲಕ್ಷ ಜನಸಂಖ್ಯೆ ಇರುವ ದೊಡ್ಡ ಜಿಲ್ಲೆಯಾಗಿದೆ. ಆದ್ದರಿಂದ ಈ ಜಿಲ್ಲೆಯ ಅಸಾಂಕ್ರಾಮಿಕ ರೋಗಗಳ ಅಂಕಿ ಸಂಖ್ಯೆಗಳು ರಾಜ್ಯಮಟ್ಟದಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ. ಅಲ್ಲದೇ ಪ್ರಗತಿಗೆ ಕಾರಣವಾಗುತ್ತದೆ. ಈ ಜಿಲ್ಲೆಯಲ್ಲಿ ಅಸಾಂಕ್ರಾಮಿಕ ರೋಗಗಳ ಕಾರ್ಯಕ್ರಮದಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ರಾಜ್ಯ ನೋಡಲ್ ಅಧಿಕಾರಿ ಡಾ.ರಂಗಸ್ವಾಮಿ ಅಭಿಪ್ರಾಯ ತಿಳಿಸಿದರು.

ಬೆಳಗಾವಿಯ ಬಿಮ್ಸ ಆಸ್ಪತ್ರೆಯ ಜಿರಿಯಾಟ್ರಿಕ್ ವಾರ್ಡ ಎದುರಿನ ಸಭಾಭವನದಲ್ಲಿ ವಿಶ್ವ ಕ್ಯಾನ್ಸರ ಜಾಗೃತಿ ಸಪ್ತಾಹ ನಿಮಿತ್ಯ ಬೃಹತ್ ಕ್ಯಾನ್ಸರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ, ರಾಷ್ಟ್ರೀಯ ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿತ ಖಾಯಿಲೆ ಹಾಗೂ ಪಾಶ್ರ್ವವಾಯು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ವೇದಿಕೆ ಮೇಲಿದ್ದ ಗಣ್ಯರು ಚಾಲನೆ ನೀಡಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಬಿಮ್ಸ ನಿರ್ದೇಶಕ ಡಾ.ಆರ್.ಜಿ.ವಿವೇಕಿ ಮಾತನಾಡಿ ಒಂದು ವಾರ ರಾಜ್ಯದಲ್ಲಿ ಜಾಗೃತಿ ಅಭಿಯಾನ ಮಾಡುತ್ತಿದ್ದೇವೆ. ನಿರಂತರವಾಗಿ ನಿಮ್ಮ ಮನೆಯಲ್ಲಿ ಹಾಗೂ ಅಕ್ಕ ಪಕ್ಕದಲ್ಲಿ ಕ್ಯಾನ್ಸರ್ ಸಂಬಂಧಿಸಿದ ಲಕ್ಷಣಗಳು, ನೋವು ಇದ್ದರೆ ಅವರನ್ನು ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಅಧಿಕಾರಿ, ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳಿಗೆ ಸಂಪರ್ಕ ಮಾಡುವಂತೆ ಮಾಡಬೇಕು. ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಕ್ಯಾನ್ಸರ್‍ನಿಂದ ಆಗುವ ಪ್ರಾಣಹಾನಿ ಎಷ್ಟು ಕಡಿಮೆ ಮಾಡಬೇಕೋ ಅಷ್ಟು ಕಡಿಮೆ ಮಾಡುವ ಪ್ರಯತ್ನವನ್ನು ಎಲ್ಲರೂ ಮಾಡಬೇಕು ಎಂದು ಕರೆ ನೀಡಿದರು.

ಇನ್ನು ಇದೇ ವೇಳೆ ಈ ಕಾರ್ಯಕ್ರಮದ ಕುರಿತು ನಮ್ಮ ಇನ್‍ನ್ಯೂಸ್ ಜೊತೆಗೆ ಮಾತನಾಡಿದ ಆರೋಗ್ಯ ಇಲಾಖೆಯ ರಾಜ್ಯ ನೋಡಲ್ ಅಧಿಕಾರಿ ಡಾ.ರಂಗಸ್ವಾಮಿ ಬೆಳಗಾವಿ ಜಿಲ್ಲೆಯ 44 ಲಕ್ಷದಲ್ಲಿ 28 ಲಕ್ಷದಷ್ಟು ನೋಂದಣಿಯಾಗಿದೆ. ಈ ನೋಂದಣಿಯನ್ನು ಇನ್ನು ಹೆಚ್ಚು ಚುರುಕುಗೊಳಿಸಿ ಇದನ್ನು ಮುಕ್ತಾಯಗೊಳಿಸಿದ್ರೆ ನಿರಂತರವಾಗಿ ಪ್ರತಿವರ್ಷ ಅಸಾಂಕ್ರಾಮಿಕ ರೋಗಗಳನ್ನು ಸಕಾಲದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸುವ ಕಾರ್ಯಕ್ರಮ ಚನ್ನಾಗಿ ಆಗುತ್ತದೆ. ಈಗಾಗಲೇ ಬಹಳಷ್ಟು ಅಸಾಂಕ್ರಾಮಿಕ ರೋಗಿಗಳನ್ನು ಜಿಲ್ಲಾ ಮಟ್ಟದಲ್ಲಿ ಪತ್ತೆ ಹಚ್ಚಲಾಗಿದೆ. ಆದರೆ ತತ್ರಾಂಶದಲ್ಲಿ ಅದನ್ನು ಅಳವಡಿಸಲು ಆಗಿಲ್ಲ. ಅದೆಲ್ಲವನ್ನು ಆಶಾ ಮತ್ತು ಆರೋಗ್ಯ ಕಾರ್ಯಕರ್ತರು ನಮ್ಮ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಅತ್ಯಂತ ಅಚ್ಚು ಕಟ್ಟಾಗಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ಡಾ.ರಂಗಸ್ವಾಮಿ ಅಸಾಂಕ್ರಾಮಿಕ ರೋಗಗಳ ಕಾರ್ಯಕ್ರಮದಲ್ಲಿ ಪ್ರತಿವರ್ಷ 30 ವರ್ಷ ಮೇಲ್ಪಟ್ಟ ಎಲ್ಲರೂ ರಕ್ತದೋತ್ತಡ, ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ. 30 ವರ್ಷ ಮೇಲ್ಪಟ್ಟ ಎಲ್ಲರೂ ಇದರ ಫಲಾನುಭವಿಗಳು. ಪ್ರತಿ ಐದು ವರ್ಷಕ್ಕೆ ಒಂದು ಬಾರಿ ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಬಾಯಿ ಕ್ಯಾನ್ಸರ್‍ಗೆ ಪೂರ್ವಭಾವಿ ತಪಾಸಣೆಗೆ ಒಳಪಡಬೇಕಾಗುತ್ತದೆ. ಸಮುದಾಯ ಸಹಕರಿಸಿದ್ರೆ ನಮ್ಮ ಆರೋಗ್ಯ ಕಾರ್ಯಕರ್ತರು ಉತ್ತಮವಾಗಿ ಕಾರ್ಯಕ್ರಮ ಅಳವಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿಎಚ್‍ಓ ಡಾ.ಎಸ್.ವ್ಹಿ.ಮುನ್ಯಾಳ, ಡಿಎಸ್‍ಓ ಡಾ.ಬಿ.ಎನ್.ತುಕ್ಕಾರ, ಬೆಂಗಳೂರಿನ ಎನ್‍ಸಿಡಿ ಜಂಟಿ ನಿರ್ದೇಶಕ ಡಾ.ಶ್ರೀನಿವಾಸ್, ಆರ್‍ಸಿಎಚ್‍ಓ ಡಾ.ಐ.ಪಿ.ಗಡಾದ್, ಬೆಳಗಾವಿ ವಿಭಾಗದ ಸಹ ನಿರ್ದೇಶಕ ಡಾ.ಪ್ರಭು ಬಿರಾದಾರ್, ಬಿಮ್ಸ ಅಧೀಕ್ಷಕ ಡಾ.ಅಪ್ಪಾಸಾಹೇಬ ಪಾಟೀಲ್, ಜಿಲ್ಲಾ ಸರ್ಜನ್ ಡಾ.ಸರಸ್ವತಿ, ಟಿಎಚ್‍ಓ ಡಾ.ಶಿವಾನಂದ ಮಾಸ್ತಿಹೊಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Tags:

error: Content is protected !!