ತಿಲಕ, ಕುಂಕುಮ, ಶಿಲುಬೆಗಳ ಬಗ್ಗೆ ಹೈಕೋರ್ಟ್ ಏನೂ ಹೇಳಿಲ್ಲ. ಹೈಕೋರ್ಟ್ ಮಧ್ಯಂತರ ಆದೇಶವು ಹಿಜಾಬ್ ಮತ್ತು ಕೇಸರಿ ಶಾಲಿಗೆ ಮಾತ್ರವೇ ಸಂಬಂಧಿಸಿದ್ದಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಕುಂಕುಮ ಇಟ್ಟುಕೊಂಡು ಬಂದಿದ್ದ ವಿದ್ಯಾರ್ಥಿಗೆ ವಿಜಯಪುರದ ಇಂಡಿ ಕಾಲೇಜಿನಲ್ಲಿ ನಡೆದ ಘಟನೆ ವಿಚಾರಕ್ಕೆ ಬೆಂಗಳೂರಿನ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಆರ್.ಅಶೋಕ್ ತಿಲಕ, ಕುಂಕುಮ, ಶಿಲುಬೆಗಳ ಬಗ್ಗೆ ಹೈಕೋರ್ಟ್ ಏನೂ ಹೇಳಿಲ್ಲ. ಹೈಕೋರ್ಟ್ ಮಧ್ಯಂತರ ಆದೇಶವು ಹಿಜಾಬ್ ಮತ್ತು ಕೇಸರಿ ಶಾಲಿಗೆ ಮಾತ್ರವೇ ಸಂಬಂಧಿಸಿದ್ದಾಗಿದೆ. ವಿಷಯವನ್ನು ಡೈವರ್ಟ್ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಈ ವಿಷಯದ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಸೌಹಾರ್ದದ ವಾತಾವರಣ ಕೆಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ಹಿಜಾಬ್ ವಿವಾದ ಕುರಿತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾತಾಡಿರುವ ವಿಚಾರಕ್ಕೆ ಪ್ರತಿಕ್ರಯಿಸಿದ ಆರ್.ಅಶೋಕ್ ನಾವು ಪಾಕಿಸ್ತಾನ, ಇರಾಕ್ ಮತ್ತು ಇರಾನ್‍ನಲ್ಲಿ ನೋಡಿದ್ದೇವೆ. ಅಲ್ಲಿ ಸಣ್ಣಸಣ್ಣ ಮಕ್ಕಳ ಕೈಗೂ ಬಂದೂಕು ಕೊಡುತ್ತಾರೆ. ಶಾಲೆಯಲ್ಲಿ ಧರ್ಮ ಬೇಡ, ಮನೆ, ಹೊರಗೆ ಧರ್ಮ ಆಚರಣೆಗೆ ಒಂದು ಮಿತಿ ಇರಬೇಕು. ವಿದ್ಯೆ ಮುಖ್ಯ, ದೇಶ ಮುಖ್ಯವೇ ಹೊರತು ಧರ್ಮ ಮುಖ್ಯ ಅಲ್ಲ ಎಂದು ತಿರುಗೇಟು ನೀಡಿದರು.
ವಿಧಾನಸಭೆಯಲ್ಲಿ ಕಾಂಗ್ರೆಸ್ ಅಹೋರಾತ್ರಿ ಧರಣಿ ಬಗ್ಗೆ ಎರಡು ಬಾರಿ ಸಂಧಾನ ಮಾಡಿದರೂ ಅವರು ನಮ್ಮ ಮಾತು ಕೇಳಲಿಲ್ಲ. ರಾಜ್ಯದ ಜನತೆ ಕಟ್ಟುವ ತೆರಿಗೆಯಿಂದ ನಾವು ಸಂಬಳ ಪಡೆಯುತ್ತಿದ್ದೇವೆ. ಜನರ ಕಷ್ಟದ ಬಗ್ಗೆ ನಾವು ಧ್ವನಿ ಎತ್ತಬೇಕು. ಪಕ್ಷದ ವಿಚಾರದ ಬಗ್ಗೆ ಮಾತನಾಡಲು ವಿಧಾನಸೌಧ ಕಟ್ಟಿಲ್ಲ. ಈ ದಬ್ಬಾಳಿಕೆ, ದೌರ್ಜನ್ಯ ಮತ್ತು ಗೂಂಡಾಗಿರಿ ಪ್ರವೃತ್ತಿಯನ್ನು ಕಾಂಗ್ರೆಸ್ ಬಿಡಬೇಕು. ಮೂವತ್ತು, ನಲವತ್ತು ಜನರಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಕಾರ್ಯಕ್ರಮಗಳ ಉಲ್ಲೇಖವಿದೆ. ಪ್ರತಿಪಕ್ಷಗಳು ಸೋಮವಾರದಿಂದ ಆದರೂ ಸದನದಲ್ಲಿ ಚರ್ಚೆ ಮಾಡಲು ಅವಕಾಶ ನೀಡಬೇಕು ಎಂದು ಆರ್.ಅಶೋಕ್ ಸ್ಪಷ್ಟಪಡಿಸಿದರು.