ನಮ್ಮಭಾರತ ಭೂಮಿ ಅನಾದಿಕಾಲದಿಂದಲೂ ಅನೇಕ ಬಲಿಷ್ಠ, ಧೈರ್ಯವಂತ, ವೀರ ಯೋಧರು, ಸಾಹಸಿ ವನಿತೆಯರು, ಆಡಳಿತಗಾರರನ್ನು ಹೊಂದಿದೆ. ತಮ್ಮ ತಾಯಿನಾಡು, ಸ್ವರಾಜ್ಯವನ್ನು ರಕ್ಷಿಸಲು ಅದೆಷ್ಟೋ ಮಂದಿ ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ. ಅಂತಹ ಮಹಾನ್ ಧೈರ್ಯಶಾಲಿ ಯೋಧರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಕೂಡ ಒಬ್ಬರು. ಸ್ವರಾಜ್ಯ, ಸುಶಾಸನದ ಪರಂಪರೆ ನೀಡಿದ ಮಹಾನ್ ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜನ ಜನ್ಮದಿನ ಇಂದು. ಗುಮ್ಮಟನಗಿ ವಿಜಯಪುರದಲ್ಲಿ ಇಂದು ಶಿವಾಜಿ ಜಯಂತಿ ಆಚರಿಸಲಾಯಿತು. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಶಿವಾಜಿ ಮಹಾರಾಜರು ಶಹಾಜಿರಾಜೆ ಭೋಸ್ಲೆ ಮತ್ತು ಜಿಜಾಬಾಯಿ ಪುತ್ರರು. ಇವರ ಪೂರ್ಣ ಹೆಸರು ಶಿವಾಜಿರಾಜೆ ಶಹಜಿರಾಜೆ ಬೋಂಸ್ಲೆ. ಇವರು ಫೆಬ್ರವರಿ 19, 1630 ರಲ್ಲಿ ಮಹಾರಾಷ್ಟ್ರದ ಪುಣೆಯ ಶಿವನೇರಿ ಕೋಟೆಯಲ್ಲಿ ಜನಿಸಿದರು. ಶಿವಾಜಿ ಮಹಾರಾಜ ಮರಾಠ ಸಾಮ್ರಾಜ್ಯದ ಸ್ಥಾಪಕ ಮತ್ತು ಭಾರತದ ಪ್ರಗತಿಪರ, ಧೈರ್ಯಶಾಲಿ ಮತ್ತು ಬುದ್ಧಿವಂತ ರಾಜರಲ್ಲಿ ಒಬ್ಬರಾಗಿದ್ದರು. ಈ ವರ್ಷ ಮಹಾನ್ ಮರಾಠ ಯೋಧನ 392 ನೇ ಜನ್ಮ ವಾರ್ಷಿಕೋತ್ಸವವನ್ನು ವಿಜಯಪುರ ನಗರದ ವಿವಿದಡೆ ಸಂಭ್ರಮದಿಂದ ಆಚರಿಸಲಾಯಿತು. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ, ಛತ್ರಪತಿ ಶಿವಾಜಿ ಮಹಾರಾಜ್ ಶಿಕ್ಷಣ ಸೊಸೈಟಿಯು ಶಿವಾಜಿ ಮಹಾರಾಜರ ಹೆಸರಿನಲ್ಲಿ ನಡೆಯುತ್ತಿದೆ. ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ರವೀಂದ್ರನಾಥ ಠಾಗೋರ್ ಶಾಲಾ ಕಾಲೇಜಿನಲ್ಲಿ ಸಂಭ್ರಮದಿಂದ ಜಯಂತಿ ಆಚರಿಸಲಾಯಿತು. ಪುಟಾಣಿ ಮಕ್ಕಳು ವೀರ ಶಿವಾಜಿ ವೇಷ ಧರಿಸಿ ಕೈಯಲ್ಲಿ ಖಡ್ಗ ಹಿಡಿದು ಮಿರಿಮಿರಿ ಮಿಂಚಿದರು. ಶಾಲೆಯ ಆವರಣದಲ್ಲಿ ಶಿವಾಹಿ ಭಾವಚಿತ್ರಕ್ಕೆ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ ಪೂಜೆ ಸಲ್ಲಿಸಿದರೇ ಇತ್ತ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಿವಾಜಿ ಗಾಯಕವಾಡ ಮಕ್ಕಳಿಗೆ ಶಿವಾಜಿ ಮಹಾರಾಜರ ಧೈರ್ಯದ ಕಥೆ ವಿವರಿಸಿ ಎಂತಹದೇ ಪರಿಸ್ಥಿತಿ ಬರಲಿ ಧೈರ್ಯದಿಂದ ಎದುರಿಸಿ ಎಂದು ಕರೆ ನೀಡಿದರು.
ಇನ್ನೂ ಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಯಾರದೊ ಹುಟ್ಟು ಹಬ್ಬದ ಸಂಭ್ರಮವಿದೆಯೋ ಎನ್ನುವಂತೆ ಭಾಗವಹಿಸಿದ್ದರು. ಶಾಲೆಯಲ್ಲಿ ಶಿವಾಜಿ ಮಹಾರಾಜರ ರಂಗೋಲಿ ಬಿಡಿಸಿ, ಚಿತ್ರಕಲೆಯಲ್ಲಿ ಶಿವಾಜಿ ಮಹಾರಾಜರನ್ನು ಅರಳಿಸಿದ್ದರು. ಶಾಲೆಯಲ್ಲಿ ಬಲೂನ್ ಅಲಂಕಾರ ಮಾಡಲಾಗಿತ್ತು. ಶಿವಾಜಿ ವೇಷಧಾರಿ ಮಕ್ಕಳಿಗೆ ಶಾಲೆ ವತಿಯಿಂದ ಕಾಗದದಿಂದ ತಯಾರಿಸಿದ ಹೂವನ್ನು ನೀಡಿ, ಸಿಹಿ ತಿನ್ನಿಸುವ ಮೂಲಕ ಅಧ್ಯಕ್ಷ ಶಿವಾಜಿ ಗಾಯಕವಾಡ ಅಭಿನಂಧಿಸಿದರು. ಈ ಸಂದರ್ಭದಲ್ಲಿ ಮದ್ಯಮ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ದೃಷ್ಟಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ವಸಂತ ಗಾಯಕವಾಡ, ಆಡಳಿತಾಧಿಕಾರಿ ರೀತಾ ಗಾಯಕವಾಡ, ಹಾಗೂ ಕಾಲೇಜಿನ ಪ್ರಿನ್ಸಿಪಲ್ ಜಯರಾಮ, ಶಿಕ್ಷಕರಾದ ವಿದ್ಯಾಧರ ಪಾಟೀಲ, ಗಜಾನನ, ಶಿವರಾಮ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಯಂತಿ ಕಾರ್ಯಕ್ರಮದ ಬಳಿಕ ಎಲ್ಲ ಮಕ್ಕಳಿಗೆ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳುಛತ್ರಪತಿ ಶಿವಾಜಿ ಕೇವಲ ಹಿಂದೂ ಧರ್ಮಕ್ಕೆ ಮೀಸಲಾ ಗಿರಲಿಲ್ಲ. ಧಾರ್ಮಿಕ ಸಹಿಷ್ಣುಹಿಯಾಗಿದ್ದರು. ತಮ್ಮ ಆಡಳಿತ ಅವಧಿಯಲ್ಲಿ ಹಿಂದೂಗಳು, ಮುಸ್ಲಿಂರನ್ನು ಸಮಾನವಾಗಿ ಕಾಣುತ್ತಿದ್ದರು. ಎಲ್ಲಾ ಧರ್ಮದವರಿಗೂ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದ್ದರು ಎಂದು ಹಾಡಿ ಹೊಗಳಿದರು.
ಒಟ್ನಲ್ಲಿ ಹಿಂದವಿ ಸಾಮ್ರಾಜ್ಯದ ಕನಸು ಕಂಡ ಶಿವಾಜಿ ಮಹಾರಾಜರರ ಜಯಂತಿಯಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಪಾಲ್ಗೊಂಡು ಶಿವಾಜಿ ಮಹಾರಾಜರಂತೆ ದೇಶ ಕಾಯುವ ಒಬ್ಬ ಯೋಧರಾಗೋಣ ಎಂಬ ಸಂಕಲ್ಪ ತೊಟ್ಟರು.